ಸುದೀಪ್ ರಾಜ್ ಸುಳ್ಯ
ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಅಗ್ನಿ ಅವಘಡಗಳ ಸರಣಿಯು ಅಗ್ನಿಶಾಮಕ ದಳದ ಅಸಹಾಯಕತೆಯನ್ನು ಬಿಚ್ಚಿಡುತ್ತಿದ್ದು, ವಿಶೇಷವಾಗಿ ಬ್ರಹ್ಮಾವರ ಭಾಗಕ್ಕೆ ಪ್ರತ್ಯೇಕ ಅಗ್ನಿಶಾಮಕ ಠಾಣೆಯ ಅಗತ್ಯತೆ ತೀವ್ರವಾಗಿ ಎದ್ದು ಕಾಣುತ್ತಿದೆ. ಪ್ರಸಕ್ತ 2026ನೇ ಸಾಲಿನಲ್ಲಿ ಜಿಲ್ಲೆಯಾದ್ಯಂತ ಇದುವರೆಗೆ ಒಟ್ಟು268 ಅಗ್ನಿ ಅವಘಡಗಳು ಸಂಭವಿಸಿದ್ದು, ಈ ಪೈಕಿ ಬ್ರಹ್ಮಾವರ ವ್ಯಾಪ್ತಿಯೊಂದರಲ್ಲೇ 60ಕ್ಕೂ ಅಧಿಕ ಪ್ರಕರಣಗಳು ವರದಿಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಭಾಗದಲ್ಲಿ ಸಂಭವಿಸುವ ತುರ್ತು ಅನಾಹುತಗಳ ಸಂದರ್ಭದಲ್ಲಿ ಉಡುಪಿಯಿಂದಲೇ ವಾಹನ ಬರಬೇಕಾದ ಅನಿವಾರ್ಯತೆ ಇರುವುದರಿಂದ, ಬೆಂಕಿ ನಂದಿಸುವ ಕಾರ್ಯಾಚರಣೆ ವಿಳಂಬವಾಗಿ ಹೆಚ್ಚಿನ ನಷ್ಟ ಸಂಭವಿಸುತ್ತಿದೆ.
ಜಿಲ್ಲೆಯಲ್ಲಿ ಪ್ರಸ್ತುತ ಉಡುಪಿ, ಕಾರ್ಕಳ, ಕುಂದಾಪುರ, ಬೈಂದೂರು ಮತ್ತು ಮಲ್ಪೆ ಸೇರಿ ಒಟ್ಟು ಐದು ಅಗ್ನಿಶಾಮಕ ಠಾಣೆಗಳಿದ್ದು, ಕೇವಲ ಐದು ವಾಹನಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಉಡುಪಿ ಠಾಣೆಗೆ ನಿಗದಿಯಾಗಿದ್ದ ಎರಡು ವಾಹನಗಳಲ್ಲಿ ಒಂದನ್ನು ತಾತ್ಕಾಲಿಕವಾಗಿ ಬೈಂದೂರಿಗೆ ನಿಯೋಜಿಸಲಾಗಿದ್ದು, ಸದ್ಯ ಉಡುಪಿಯಲ್ಲಿರುವ ಏಕೈಕ ವಾಹನವು ಉಡುಪಿ, ಕಾಪು, ಬ್ರಹ್ಮಾವರ ಮತ್ತು ಹೆಬ್ರಿ ಎಂಬ ನಾಲ್ಕು ಬೃಹತ್ ತಾಲೂಕುಗಳ ವ್ಯಾಪ್ತಿಯನ್ನು ನಿಭಾಯಿಸಬೇಕಿದೆ. ದೂರದ ಪ್ರದೇಶಗಳಿಗೆ ವಾಹನ ತಲುಪಲು ಕನಿಷ್ಠ ಅರ್ಧದಿಂದ ಮುಕ್ಕಾಲು ಗಂಟೆಯ ಅವಶ್ಯಕತೆಯಿದ್ದು, ಈ ವಿಳಂಬವು ಅಗ್ನಿ ಅವಘಡದ ತೀವ್ರತೆಯನ್ನು ಹೆಚ್ಚಿಸುತ್ತಿದೆ. ಇದರ ಜೊತೆಗೆ ಸಿಬ್ಬಂದಿ ಕೊರತೆಯೂ ಇಲಾಖೆಯನ್ನು ಕಾಡುತ್ತಿದ್ದು, ಉಡುಪಿ ಠಾಣೆಯಲ್ಲಿ 42 ಸಿಬ್ಬಂದಿ ಇರಬೇಕಾದ ಜಾಗದಲ್ಲಿ ಕೇವಲ ಅರ್ಧದಷ್ಟು ಮಂದಿ ಮಾತ್ರ ಹಗಲಿರುಳು ಶ್ರಮಿಸುತ್ತಿದ್ದಾರೆ.
ಅಗ್ನಿ ಅವಘಡಗಳ ಅಂಕಿ ಅಂಶ:
ಜಿಲ್ಲೆಯ ಅಗ್ನಿ ಅವಘಡಗಳ ಅಂಕಿ-ಅಂಶಗಳನ್ನು ಗಮನಿಸಿದರೆ ಪರಿಸ್ಥಿತಿಯ ಗಂಭೀರತೆ ಅರಿವಾಗುತ್ತದೆ. 2024ರಲ್ಲಿ ಜಿಲ್ಲೆಯಾದ್ಯಂತ 497 ಪ್ರಕರಣಗಳು ದಾಖಲಾಗಿದ್ದರೆ, 2025ರಲ್ಲಿ ಈ ಪ್ರಮಾಣ 513ಕ್ಕೆ ಏರಿಕೆಯಾಗಿತ್ತು. ಪ್ರಸಕ್ತ 2026ನೇ ಸಾಲಿನಲ್ಲಿ ಕೇವಲ ನಾಲ್ಕು ತಿಂಗಳ ಅವಧಿಯಲ್ಲೇ 268 ಪ್ರಕರಣಗಳು ವರದಿಯಾಗಿರುವುದು ಪರಿಸ್ಥಿತಿ ಕೈಮೀರುತ್ತಿರುವುದಕ್ಕೆ ಸಾಕ್ಷಿಯಾಗಿದೆ. ಈ ಪೈಕಿ ಒಣಗಿದ ಹುಲ್ಲು ಮತ್ತು ಗಿಡಗಂಟಿಗಳಿಗೆ ತಗುಲಿದ ಬೆಂಕಿಯ ಪ್ರಕರಣಗಳೇ ಸಿಂಹಪಾಲಾಗಿದ್ದು, ಜಿಲ್ಲೆಯಾದ್ಯಂತ ಒಟ್ಟು1181 ಇಂತಹ ಘಟನೆಗಳು ಈವರೆಗೆ ಸಂಭವಿಸಿವೆ. ಅರಣ್ಯ ಮತ್ತು ಅರಣ್ಯದಂಚಿನ ಪ್ರದೇಶಗಳಲ್ಲಿ 559 ಅಗ್ನಿ ಅವಘಡಗಳು ನಡೆದಿರುವುದು ಅಂಕಿ-ಅಂಶಗಳಿಂದ ತಿಳಿದುಬಂದಿದೆ.
ಏಕಕಾಲದಲ್ಲಿ ಸ್ಪಂದನೆ ಕಷ್ಟ:
ಏಕಕಾಲದಲ್ಲಿ ಎರಡು ಅಥವಾ ಮೂರು ಕಡೆಗಳಲ್ಲಿ ಅವಘಡ ಸಂಭವಿಸಿದರೆ ಪರಿಸ್ಥಿತಿ ನಿಭಾಯಿಸುವುದು ಅಗ್ನಿಶಾಮಕ ದಳಕ್ಕೆ ದೊಡ್ಡ ಸವಾಲಾಗಿದೆ. ಪ್ರತೀ ಠಾಣೆಗೆ ದಿನಕ್ಕೆ ಕನಿಷ್ಠ 10ಕ್ಕೂ ಅಧಿಕ ತುರ್ತು ಕರೆಗಳು ಬರುತ್ತಿದ್ದು, ಪರ್ಯಾಯ ವಾಹನಗಳಿಲ್ಲದೆ ಜನಸಾಮಾನ್ಯರ ಆಸ್ತಿಪಾಸ್ತಿ ರಕ್ಷಿಸುವುದು ಕಷ್ಟಸಾಧ್ಯವಾಗುತ್ತಿದೆ. ಬ್ರಹ್ಮಾವರವು ವೇಗವಾಗಿ ಬೆಳೆಯುತ್ತಿರುವ ಪಟ್ಟಣವಾಗಿದ್ದು, ಇಲ್ಲಿನ ಜನವಸತಿ ಮತ್ತು ವಾಣಿಜ್ಯ ಸಂಕೀರ್ಣಗಳ ಸುರಕ್ಷತೆಯ ದೃಷ್ಟಿಯಿಂದ ಪ್ರತ್ಯೇಕ ಅಗ್ನಿಶಾಮಕ ಠಾಣೆಯನ್ನು ಸ್ಥಾಪಿಸುವುದು ಜಿಲ್ಲಾಡಳಿತ ಮತ್ತು ಸರ್ಕಾರದ ಮುಂದಿರುವ ತುರ್ತು ಆದ್ಯತೆಯಾಗಬೇಕಿದೆ.
ತಾಲೂಕಿಗೊಂದು ಅಗ್ನಿಶಾಮಕ ವಾಹನವಿರಲಿ:
ಜಿಲ್ಲಾ ಕೇಂದ್ರದಲ್ಲಿ ನಾಲ್ಕು ತಾಲೂಕುಗಳ ವ್ಯಾಪ್ತಿಗೆ ಕೇವಲ ಒಂದು ವಾಹನ ಲಭ್ಯವಿರುವುದು ತುರ್ತು ಸಂದರ್ಭಗಳಲ್ಲಿ ರಕ್ಷಣಾ ಕಾರ್ಯಾಚರಣೆ ವಿಳಂಬವಾಗಲು ಪ್ರಮುಖ ಕಾರಣವಾಗಿದೆ. ಜಿಲ್ಲೆಯಾದ್ಯಂತ ಕಳೆದ ಮೂರು ವರ್ಷಗಳಲ್ಲಿ ಒಟ್ಟು 2190 ಅಗ್ನಿ ಅವಘಡದ ಕರೆಗಳು ದಾಖಲಾಗಿದ್ದು, ಇವುಗಳನ್ನು ಸಮರ್ಪಕವಾಗಿ ನಿಭಾಯಿಸಲು ಪ್ರತಿಯೊಂದು ತಾಲೂಕು ಕೇಂದ್ರಗಳಲ್ಲೂ ಕನಿಷ್ಠ ಎರಡು ಸುಸಜ್ಜಿತ ವಾಹನಗಳು ಮತ್ತು ಪೂರ್ಣ ಪ್ರಮಾಣದ ಸಿಬ್ಬಂದಿ ನೇಮಕವಾಗುವುದು ಇಂದಿನ ತುರ್ತು ಅಗತ್ಯವಾಗಿದೆ.



