ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನಲ್ಲಿ ಅಕ್ರಮವಾಗಿ ವಾಸವಿದ್ದ ಪಾಕಿಸ್ತಾನಿ ಮೂಲದ ತಾಯಿ ಮತ್ತು ಮಗನನ್ನು ಬಂಧಿಸಲಾಗಿದ್ದು, ಇವರು ಕಳೆದ ಕೆಲವು ವರ್ಷಗಳಿಂದ ಭಾರತೀಯ ನಾಗರಿಕರ ಸೋಗಿನಲ್ಲಿ ನಕಲಿ ಆಧಾರ್, ರೇಷನ್ ಕಾರ್ಡ್ ಮತ್ತು ವೋಟರ್ ಐಡಿ ಹೊಂದಿದ್ದರು ಎಂಬ ಸತ್ಯ ತನಿಖೆಯಿಂದ ಹೊರಬಿದ್ದಿದೆ.
ಬಂಧಿತರನ್ನು ಫರ್ಹಾನಾಜ್ (52) ಮತ್ತು ಆಕೆಯ ಹಿರಿಯ ಮಗ ಮೊಹಮ್ಮದ್ ಫರ್ದೀನ್ ಖಾನ್ (22) ಎಂದು ಗುರುತಿಸಲಾಗಿದೆ.
ತನಿಖೆಯಲ್ಲಿ ಬಯಲಾದ ದೆಹಲಿ-ದುಬೈ ಕನೆಕ್ಷನ್!
ಪಾಕಿಸ್ತಾನಿ ಪ್ರಜೆಯಾದ ಫರ್ಹಾನಾಜ್, ಯುಎಇ (ದುಬೈ)ನಲ್ಲಿ ಕೆಲಸ ಮಾಡುತ್ತಿದ್ದ ಬಾಗೇಪಲ್ಲಿ ಮೂಲದ ಮೊಹಮ್ಮದ್ ಆಯೂಬ್ ಖಾನ್ ಎಂಬಾತನನ್ನು ಮದುವೆಯಾಗಿದ್ದಳು. ಇವರ ಮೊದಲ ಮಗ ಮೊಹಮ್ಮದ್ ಫರ್ದೀನ್ ಪಾಕಿಸ್ತಾನದಲ್ಲೇ ಜನಿಸಿದ್ದು, ಆತ ಹುಟ್ಟಿನಿಂದಲೇ ಪಾಕ್ ಪಾಸ್ಪೋರ್ಟ್ ಹೊಂದಿದ್ದಾನೆ. ಇವರಿಬ್ಬರು ಭಾರತಕ್ಕೆ ವೀಸಾ ಪಡೆದು ಬಂದಿದ್ದರಾದರೂ, ವೀಸಾ ಅವಧಿ ಮುಗಿದ ನಂತರವೂ ಮರಳಿ ಪಾಕಿಸ್ತಾನಕ್ಕೆ ಹೋಗದೆ ಭಾರತದಲ್ಲೇ ಅಕ್ರಮವಾಗಿ ಉಳಿದುಕೊಂಡಿದ್ದರು.
ಬೆಂಗಳೂರು ವಿಳಾಸ ಬಳಸಿ ನಕಲಿ ದಾಖಲೆ ಸೃಷ್ಟಿ!
ಬಾಗೇಪಲ್ಲಿ ತಹಶೀಲ್ದಾರ್ ಮನೀಷಾ ಎನ್. ಪತ್ರಿ ನೀಡಿದ ಅಧಿಕೃತ ದೂರಿನ ಪ್ರಕಾರ, ಆರೋಪಿಗಳು ಬೆಂಗಳೂರಿನ ನಕಲಿ ವಿಳಾಸವನ್ನು ಬಳಸಿಕೊಂಡು ಭಾರತದ ಬ್ಯಾಂಕ್ ಖಾತೆಗಳು, ಆಧಾರ್ ಕಾರ್ಡ್, ಪಡಿತರ ಚೀಟಿ ಮತ್ತು ಮತದಾರರ ಗುರುತಿನ ಚೀಟಿಗಳನ್ನು ಪಡೆದುಕೊಂಡಿದ್ದರು. ವಿದೇಶಿ ಪ್ರಜೆಗಳು ಭಾರತದ ಪೌರತ್ವ ಪಡೆಯದೆ ಈ ದಾಖಲೆ ಹೊಂದುವುದು ಕಾನೂನುಬಾಹಿರವಾಗಿರುವುದರಿಂದ ಇವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ.
ಇದನ್ನೂ ಓದಿ:
ದಾಖಲಾದ ಗಂಭೀರ ಪ್ರಕರಣ
ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಕುಶಾಲ್ ಚೌಕ್ಸೆ ಮಾಹಿತಿ ಪ್ರಕಾರ, ತಾಯಿ-ಮಗ ಇಬ್ಬರ ವಿರುದ್ಧವೂ ಭಾರತೀಯ ನ್ಯಾಯ ಸಂಹಿತೆ (BNS), ವಿದೇಶಿಯರ ಕಾಯ್ದೆ ಮತ್ತು ಪ್ರಜಾಪ್ರತಿನಿಧಿ ಕಾಯ್ದೆಯಡಿ ಗಂಭೀರ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಜೈಲಿಗಟ್ಟಲಾಗಿದೆ. ಇವರಿಗೆ ನಕಲಿ ದಾಖಲೆ ಸೃಷ್ಟಿಸಿಕೊಟ್ಟ ಸ್ಥಳೀಯ ಜಾಲದ ಪತ್ತೆಗೆ ಬಾಗೇಪಲ್ಲಿ ಪೊಲೀಸರು ಬಲೆ ಬೀಸಿದ್ದಾರೆ.



