ಹೊಸದಿಗಂತ ವರದಿ ಖಾನಾಪುರ:
ಅರಣ್ಯ ಪ್ರದೇಶದ ತನ್ನ ಹಿಂಡಿನಿಂದ ತಪ್ಪಿಸಿಕೊಂಡ ೧೦-೧೨ ವರ್ಷ ವಯಸ್ಸಿನ ಕಾಡಾನೆಯೊಂದು ಶನಿವಾರ ಪಟ್ಟಣದ ಹೊರವಲಯದ ಜನವಸತಿ ಪ್ರದೇಶಗಳ ಬಳಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿತ್ತು.
ಶುಕ್ರವಾರ ಮಧ್ಯಾಹ್ನ ಮತ್ತು ಸಂಜೆಯ ಹೊತ್ತಿನಲ್ಲಿ ತಾಲೂಕಿನ ಜಾಂಬೋಟಿ ರಸ್ತೆಯ ನಾಗುರ್ಡಾ, ಮೋದೆಕೊಪ್ಪ, ಕಾನಸುಲಿ ಗ್ರಾಮಗಳ ವ್ಯಾಪ್ತಿಯಲ್ಲಿ ಕಾಣಿಸಿಕೊಂಡಿದ್ದ ಆನೆ ಶನಿವಾರ ನಸುಕಿನಜಾವ ಬಾಚೋಳಿ ಮೂಲಕ ಪಟ್ಟಣ ಪ್ರವೇಶಿಸಿ ಶಿವಾಜಿನಗರ, ಮಯೇಕರ ನಗರ, ಅಸೋಗಾ ರಸ್ತೆ, ರೈಲ್ವೆ ಸ್ಟೇಶನ್ ಪ್ರದೇಶದಲ್ಲಿ ಕಾಣಿಸಿಕೊಂಡಿದೆ.
ಕಳೆದ ಹಲವು ದಿನಗಳಿಂದ ತಾಲೂಕಿನ ನೀಲಾವಡೆ ಅರಣ್ಯದಲ್ಲಿ ತಂಗಿದ್ದ ಕಾಡಾನೆಗಳ ಹಿಂಡಿನಿಂದ ಬೇರ್ಪಟ್ಟ ಆನೆಯೊಂದು ಶನಿವಾರ ಹಗಲು ಹೊತ್ತಿನಲ್ಲೇ ಪಟ್ಟಣದ ಹೊರವಲಯದ ಜನವಸತಿ ಪ್ರದೇಶದ ಬಳಿ ಕಾಣಿಸಿಕೊಂಡಿದೆ. ಜನವಸತಿ ಪ್ರದೇಶದ ಬಳಿ ಕಾಡಾನೆ ಪತ್ತೆಯಾದ ಮಾಹಿತಿ ಲಭ್ಯವಾಗುತ್ತಲೇ ಆನೆ ಕಾಣಿಸಿಕೊಂಡ ಪ್ರದೇಶದತ್ತ ನಮ್ಮ ಇಲಾಖೆಯ ಅಕಾರಿಗಳು ಹಾಗೂ ಸಿಬ್ಬಂದಿ ಧಾವಿಸಿದ್ದಾರೆ. ಆನೆ ಪಟ್ಟಣದಿಂದ ಹೊರನಡೆಯುವ ನಿಟ್ಟಿನಲ್ಲಿ ಗಮನಹರಿಸಲಾಗಿದೆ.
ಮಲಪ್ರಭಾ ನದಿಯನ್ನು ದಾಟಿ ರುಮೇವಾಡಿ, ಶೇಡೇಗಾಳಿ ಗ್ರಾಮಗಳ ಮೂಲಕ ಅರಣ್ಯ ಪ್ರದೇಶವನ್ನು ಪ್ರವೇಶಿಸಿದೆ. ಆನೆಯ ಚಲನವಲನದ ಬಗ್ಗೆ ಗಮನಹರಿಸಲಾಗುತ್ತಿದೆ. ಇಲಾಖೆಯ ಸಿಬ್ಬಂದಿಯನ್ನು ಆನೆ ಸಾಗಿದ ಮಾರ್ಗದಲ್ಲಿ ಗಸ್ತು ಕರ್ತವ್ಯಕ್ಕೆ ನಿಯುಕ್ತಿಗೊಳಿಸಲಾಗಿದೆ ಎಂದು ಸಹಾಯಕ ಅರಣ್ಯ ಸಂರಕ್ಷಣಾಕಾರಿ ಸುನೀತಾ ನಿಂಬರಗಿ ಮಾಹಿತಿ ನೀಡಿದ್ದಾರೆ.



