ಹೊಸದಿಗಂತ ಡಿಜಿಟಲ್ ಡೆಸ್ಕ್;
ರಾಜ್ಯ ವಿಧಾನಪರಿಷತ್ ಚುನಾವಣೆಯಲ್ಲಿ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಶಾಸಕರ ಅಡ್ಡ ಮತದಾನದ ಬಲದಿಂದ ಕಾಂಗ್ರೆಸ್‌ನ 5ನೇ ಅಭ್ಯರ್ಥಿ ವಿನಯ್ ಕಾರ್ತಿಕ್ ಪ್ರಕಾಶ್ ಭರ್ಜರಿ ಜಯ ದಾಖಲಿಸಿದ್ದಾರೆ. ಈ ಐತಿಹಾಸಿಕ ಗೆಲುವನ್ನು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ‘ಪ್ರಜಾಪ್ರಭುತ್ವಕ್ಕೆ ಸಿಕ್ಕ ಜಯ’ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಮೈತ್ರಿಕೂಟಕ್ಕೆ ಬಿಗ್ ಶಾಕ್ ನೀಡಿದ ಅಡ್ಡ ಮತದಾನ:
ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಮೇಲ್ಮನೆ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಕಣಕ್ಕಿಳಿಸಿದ್ದ ಐದೂ ಅಭ್ಯರ್ಥಿಗಳು ಮೊದಲ ಸುತ್ತಿನಲ್ಲೇ ವಿಜಯಶಾಲಿಯಾಗಿದ್ದಾರೆ. ಮೈತ್ರಿಕೂಟದ ಲೆಕ್ಕಾಚಾರದ ಪ್ರಕಾರ ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು ಗೆಲುವಿಗೆ ಬಿಜೆಪಿಯ ಹೆಚ್ಚುವರಿ ಮತಗಳ ಬೆಂಬಲವಿತ್ತು. ಆದರೆ ಮತದಾನದ ವೇಳೆ ಜೆಡಿಎಸ್‌ನ 4 ಹಾಗೂ ಬಿಜೆಪಿಯ 2 ಶಾಸಕರು ಪಕ್ಷದ ನಿರ್ಧಾರದ ವಿರುದ್ಧವಾಗಿ ಕಾಂಗ್ರೆಸ್‌ನ 5ನೇ ಅಭ್ಯರ್ಥಿಗೆ ಅಡ್ಡ ಮತದಾನ ಮಾಡಿದ್ದಾರೆ. ಇದರಿಂದಾಗಿ ಕಾಂಗ್ರೆಸ್‌ನ ವಿನಯ್ ಕಾರ್ತಿಕ್ ಗರಿಷ್ಠ 32 ಮತಗಳನ್ನು ಪಡೆದು ಸುಲಭವಾಗಿ ಜಯಭೇರಿ ಬಾರಿಸಿದರು.
ಇದನ್ನೂ ಓದಿ:
ಟ್ವೀಟ್ ಮೂಲಕ ಸುರ್ಜೇವಾಲಾ ಅಭಿನಂದನೆ:
ಫಲಿತಾಂಶ ಪ್ರಕಟದ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿರುವ ರಣದೀಪ್ ಸಿಂಗ್ ಸುರ್ಜೇವಾಲಾ, “ಮೊದಲ ಸುತ್ತಿನಲ್ಲೇ ಕರ್ನಾಟಕದ ಐದೂ ವಿಧಾನಪರಿಷತ್ ಸ್ಥಾನಗಳನ್ನು ಗೆಲ್ಲುವ ಮೂಲಕ ಪ್ರಜಾಪ್ರಭುತ್ವ ಜಯಗಳಿಸಿದೆ” ಎಂದಿದ್ದಾರೆ. ವಿಜೇತ ಅಭ್ಯರ್ಥಿಗಳಾದ ಬಿ.ಕೆ. ಹರಿಪ್ರಸಾದ್, ಬಿ.ಎಸ್. ಶಿವಣ್ಣ, ಪಿ.ವಿ. ಮೋಹನ್, ತಿಪ್ಪಣ್ಣಪ್ಪ ಕಮಕನೂರ್ ಮತ್ತು ವಿನಯ್ ಕಾರ್ತಿಕ್ ಪ್ರಕಾಶ್ ಅವರಿಗೆ ಹಾರ್ದಿಕ ಅಭಿನಂದನೆ ಸಲ್ಲಿಸಿದ್ದಾರೆ. ಕರ್ನಾಟಕದ ಶಾಸಕರು ಪ್ರದರ್ಶಿಸಿದ ಈ ಬೆಂಬಲವು ರಾಜ್ಯ ಸರ್ಕಾರದ ಸುಭದ್ರ ಆಡಳಿತಕ್ಕೆ ಸಿಕ್ಕ ಮನ್ನಣೆ ಎಂದು ಅವರು ಶ್ಲಾಘಿಸಿದ್ದಾರೆ.



