April 20, 2026
Monday, April 20, 2026
spot_img

ನೂರಾರು ಕೋಟಿ ಆಫರ್ ಬಂದ್ರೂ ಅಫ್ಘಾನ್ ಬಿಡಲ್ಲ: ರಶೀದ್ ಖಾನ್ ದೇಶಪ್ರೇಮಕ್ಕೆ ಸಲಾಂ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಫ್ಘಾನಿಸ್ತಾನ ಕ್ರಿಕೆಟ್ ಲೋಕದ ಮಾಂತ್ರಿಕ, ಐಪಿಎಲ್ ಸ್ಟಾರ್ ಸ್ಪಿನ್ನರ್ ರಶೀದ್ ಖಾನ್ ಈಗ ಹೊಸ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಅವರ ಬಹುನಿರೀಕ್ಷಿತ ಆತ್ಮಕಥೆ “Rashid Khan: From Streets to Stardom” ಬಿಡುಗಡೆಯಾಗುತ್ತಿದ್ದು, ಅದರಲ್ಲಿ ಅವರು ಸ್ಫೋಟಕ ಸತ್ಯವೊಂದನ್ನು ಬಿಚ್ಚಿಟ್ಟಿದ್ದಾರೆ. ತಮಗೆ ಭಾರತದ ಪೌರತ್ವ ಪಡೆದು, ಟೀಮ್ ಇಂಡಿಯಾ ಪರ ಆಡುವಂತೆ ಆಫರ್ ಬಂದಿತ್ತು ಎಂಬ ವಿಚಾರ ಈಗ ಸಂಚಲನ ಮೂಡಿಸಿದೆ.

ರಶೀದ್ ಪುಸ್ತಕದಲ್ಲಿ ಉಲ್ಲೇಖಿಸಿರುವಂತೆ, 2023ರ ಐಪಿಎಲ್ ಸೀಸನ್ ವೇಳೆ ಭಾರತೀಯ ಕ್ರಿಕೆಟ್ ಮಂಡಳಿಯ ಉನ್ನತ ಅಧಿಕಾರಿಯೊಬ್ಬರು ರಶೀದ್ ಖಾನ್ ಅವರನ್ನು ಭೇಟಿಯಾಗಿ, “ಭಾರತದ ಪೌರತ್ವ ಪಡೆದು ನಮ್ಮ ದೇಶದ ಪರವಾಗಿ ಅಂತರಾಷ್ಟ್ರೀಯ ಕ್ರಿಕೆಟ್ ಆಡಿ” ಎಂಬ ಆಫರ್ ನೀಡಿದ್ದರಂತೆ. ಕೇವಲ ಭಾರತ ಮಾತ್ರವಲ್ಲ, ಆಸ್ಟ್ರೇಲಿಯಾ ಕೂಡ ಇಂತಹುದೇ ಆಫರ್ ನೀಡಿ ರಶೀದ್ ಅವರನ್ನು ತನ್ನತ್ತ ಸೆಳೆಯಲು ಯತ್ನಿಸಿತ್ತು.

ಈ ಆಫರ್ ಕೇಳಿ ಒಂದು ಕ್ಷಣ ಆಶ್ಚರ್ಯಚಕಿತರಾದ ರಶೀದ್, ಯಾವುದೇ ಯೋಚನೆ ಮಾಡದೆ ಅದನ್ನು ನಿರಾಕರಿಸಿದ್ದರು. “ನಾನು ಎಷ್ಟೇ ಕಷ್ಟ ಬಂದರೂ ನನ್ನ ಸ್ವಂತ ದೇಶಕ್ಕಾಗಿ (ಅಫ್ಘಾನಿಸ್ತಾನ) ಮಾತ್ರ ಆಡುತ್ತೇನೆ. ಬೇರೆ ಯಾವುದೇ ದೇಶದ ಪರ ಕಣಕ್ಕಿಳಿಯುವ ಪ್ರಶ್ನೆಯೇ ಇಲ್ಲ” ಎಂದು ಖಡಕ್ ಆಗಿ ಉತ್ತರಿಸಿದ್ದಾಗಿ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ. ಅಫ್ಘಾನಿಸ್ತಾನದಲ್ಲಿ ರಾಜಕೀಯ ಅಸ್ಥಿರತೆ ಇದ್ದರೂ, ಹೆತ್ತ ನಾಡಿನ ಮೇಲಿರುವ ನಿಷ್ಠೆಯೇ ಈ ಕಠಿಣ ನಿರ್ಧಾರಕ್ಕೆ ಕಾರಣ ಎಂದು ಅವರು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

2018ರ ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರ ರಶೀದ್ ಮಿಂಚಿದಾಗ, ಭಾರತೀಯ ಅಭಿಮಾನಿಗಳು “ರಶೀದ್ ನಮಗೆ ಬೇಕು, ಅವರಿಗೆ ಭಾರತದ ಪೌರತ್ವ ಕೊಡಿ” ಎಂದು ಅಂದಿನ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಟ್ವಿಟರ್‌ನಲ್ಲಿ ಮನವಿ ಮಾಡಿದ್ದರು. ಆಗ ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ಅವರು “ರಶೀದ್ ನಮ್ಮ ದೇಶದ ಆಸ್ತಿ, ನಾವು ಅವರನ್ನು ಯಾರಿಗೂ ಬಿಟ್ಟುಕೊಡುವುದಿಲ್ಲ” ಎಂದು ತಮಾಷೆಯಾಗಿ ಉತ್ತರಿಸಿದ್ದರು. ಆ ಎಲ್ಲಾ ನೆನಪುಗಳು ಈಗ ರಶೀದ್ ಅವರ ಈ ಪುಸ್ತಕದ ಮೂಲಕ ಮತ್ತೆ ಮರುಕಳಿಸಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !