ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಆಡಳಿತ ಸುಧಾರಣೆ ಮತ್ತು ಬೃಹತ್ ಉದ್ಯೋಗ ಸೃಷ್ಟಿಗೆ ಪೂರಕವಾಗುವಂತಹ ಹಲವು ತೀರ್ಮಾನಗಳನ್ನು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿದೆ. ಸಾರ್ವಜನಿಕರಿಗೆ ಸರ್ಕಾರಿ ಸೇವೆಗಳನ್ನು ಅತ್ಯಂತ ಸುಲಭವಾಗಿ ಮತ್ತು ಒಂದೇ ಸೂರಿನಡಿ ತಲುಪಿಸುವ ಉದ್ದೇಶದಿಂದ ನೂತನವಾಗಿ ‘ಪ್ರಜಾಸೇವೆ ಇಲಾಖೆ’ ಯನ್ನು ಸ್ಥಾಪಿಸಲು ಕ್ಯಾಬಿನೆಟ್ ಜಂಟಿಯಾಗಿ ಒಪ್ಪಿಗೆ ಸೂಚಿಸಿದೆ.
ಇದರ ಜತೆಗೆ ಕಲ್ಯಾಣ ಕರ್ನಾಟಕ ಮತ್ತು ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಕೈಗಾರಿಕಾ ಕ್ರಾಂತಿ ಎಬ್ಬಿಸಲು ಎರಡು ಬೃಹತ್ ಉದ್ಯೋಗದಾತ ಯೋಜನೆಗಳಿಗೆ ಮುದ್ರೆ ಒತ್ತಲಾಗಿದೆ.
ಕಲಬುರಗಿಯಲ್ಲಿ ಮೆಗಾ ಜವಳಿ ಪಾರ್ಕ್
ಕಲ್ಯಾಣ ಕರ್ನಾಟಕ ಭಾಗದಲ್ಲಿ ಉದ್ಯೋಗಾವಕಾಶ ಹೆಚ್ಚಿಸಲು ಮತ್ತು ಜವಳಿ ಉದ್ಯಮಕ್ಕೆ ಉತ್ತೇಜನ ನೀಡಲು ಈ ಯೋಜನೆ ರೂಪಿಸಲಾಗಿದೆ. ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಕಲಬುರಗಿಯಲ್ಲಿ ಬೃಹತ್ ಜವಳಿ ಪಾರ್ಕ್ ಸ್ಥಾಪನೆಯಾಗಲಿದ್ದು, ಇದಕ್ಕೆ ಅಗತ್ಯವಿರುವ ಭೂಮಿ ಮತ್ತು ಮೂಲಸೌಕರ್ಯ ಒದಗಿಸಲು ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ. ಈ ಮೆಗಾ ಜವಳಿ ಪಾರ್ಕ್‌ನಿಂದಾಗಿ ಸ್ಥಳೀಯವಾಗಿ ಸಾವಿರಾರು ಯುವಕ-ಯುವತಿಯರಿಗೆ ನೇರ ಮತ್ತು ಪರೋಕ್ಷ ಉದ್ಯೋಗಾವಕಾಶಗಳು ಲಭ್ಯವಾಗಲಿವೆ.
ಇದನ್ನೂ ಓದಿ:
ದೇವನಳ್ಳಿಯಲ್ಲಿ ಹೈಟೆಕ್ ಏರೋ ಪಾರ್ಕ್
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪವಿರುವ ದೇವನಳ್ಳಿಯಲ್ಲಿ ಈ ಪಾರ್ಕ್ ತಲೆಯೆತ್ತಲಿದೆ. ರಕ್ಷಣಾ ಇಲಾಖೆ ಮತ್ತು ವೈಮಾನಿಕ ರಂಗಕ್ಕೆ ಸಂಬಂಧಿಸಿದ ಬಿಡಿಭಾಗಗಳ ತಯಾರಿಕೆ ಹಾಗೂ ಸಂಶೋಧನೆಗೆ ಇದು ಪ್ರಮುಖ ಕೇಂದ್ರವಾಗಲಿದೆ. ಜಾಗತಿಕ ಮಟ್ಟದ ಪ್ರಮುಖ ಏರೋಸ್ಪೇಸ್ ಕಂಪನಿಗಳನ್ನು ಆಕರ್ಷಿಸಲು ಈ ಪಾರ್ಕ್ ಸಹಕಾರಿಯಾಗಲಿದ್ದು, ಕೋಟ್ಯಂತರ ರೂಪಾಯಿ ಹೂಡಿಕೆಯ ನಿರೀಕ್ಷೆಯಿದೆ.
ಈ ಎರಡೂ ಬೃಹತ್ ಕೈಗಾರಿಕಾ ಯೋಜನೆಗಳ ಭೂಸ್ವಾಧೀನ ಮತ್ತು ಆರಂಭಿಕ ಕಾಮಗಾರಿಗಳನ್ನು ತಕ್ಷಣವೇ ಆರಂಭಿಸಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಮುಖ್ಯಮಂತ್ರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.



