ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಡುಗೆ ಮನೆಯಲ್ಲಿ ಉಕ್ಕಿದ ಹಾಲಿನ ವಿಷಯಕ್ಕೆ ಆರಂಭವಾದ ಜಗಳ ಸಾವಿನಲ್ಲಿ ಅಂತ್ಯವಾದ ಘಟನೆ ಆಂಧ್ರಪ್ರದೇಶದ ಕಡಪ ಜಿಲ್ಲೆಯ ಬಾಲಾಜಿನಗರದಲ್ಲಿ ನಡೆದಿದೆ.
ವೆಂಕಟ ಸುಬ್ಬಯ್ಯ ಮೃತರು. ಇವರು ಗಲ್ಫ್ ರಾಷ್ಟ್ರಗಳಲ್ಲಿ ಇಷ್ಟು ಸಮಯವೂ ಕೆಲಸ ಮಾಡಿ, ಇದೀಗಷ್ಟೇ ಆರಾಮಾಗಿ ಇರೋಣವೆಂದು ಊರಿಗೆ ಮರಳಿದ್ದರು. ಊರಿನಲ್ಲಿ ಸಣ್ಣ ಅಂಗಡಿಯನ್ನು ಇಟ್ಟುಕೊಂಡಿದ್ದ ಸುಬ್ಬಯ್ಯ ಅವರಿಗೆ ಹೆಂಡತಿ ಅನುರಾಧ ಹಾಗೂ ಮಕ್ಕಳ ಜೊತೆ ಸಮಯ ಕಳೆಯುವ ಆಸೆಯಿತ್ತು.
ಆದರೆ ಇಷ್ಟು ವರ್ಷಗಳ ಕಾಲ ದೂರದಲ್ಲಿದ್ದುದರಿಂದಲೋ, ಹೊಂದಾಣಿಕೆಯ ಕೊರತೆಯಿಂದಲೋ ಗಂಡ ಹೆಂಡತಿ ದಿನವೂ ಜಗಳವಾಡುತ್ತಿದ್ದರು. ಭಾನುವಾರ ಅನುರಾಧ ಒಲೆ ಮೇಲೆ ಹಾಲಿಟ್ಟು ಬೇರೆ ಕೆಲಸ ಮಾಡುತ್ತಿದ್ದರು. ಹಾಲು ಉಕ್ಕಿ ಚೆಲ್ಲಿತ್ತು. ಇದಕ್ಕೆ ಸುಬ್ಬಯ್ಯ ಕೋಪಗೊಂಡು ಅದೆಷ್ಟು ಬಾರಿ ಹಾಲು ಉಕ್ಕಿಸುತ್ತೀಯ ಎಂದು ಅರಚಿಕೊಂಡು ತಮ್ಮ ತಲೆಯನ್ನು ಗೋಡೆಗೆ ಸಿಟ್ಟಿನಲ್ಲಿ ಚಚ್ಚಿಕೊಂಡಿದ್ದಾರೆ.
ಪತಿಯ ಉಗ್ರರೂಪ ನೋಡಿ ಹೆದರಿದ ಅನುರಾಧ ಭಯದಲ್ಲಿ ಮನೆಯಿಂದ ಹೊರಕ್ಕೆ ಬಂದಿದ್ದಾರೆ. ಇದರಿಂದ ಸುಬ್ಬಯ್ಯ ಇನ್ನಷ್ಟು ಕೋಪಗೊಂಡಿದ್ದು, ಅಲ್ಲೇ ಇದ್ದ ಫ್ಯಾನ್ಗೆ ನೇಣು ಹಾಕಿಕೊಂಡು ಮೃತಪಟ್ಟಿದ್ದಾರೆ. ಸ್ವಲ್ಪ ಸಮಯವಾದ ನಂತರ ಪತಿ ಶಾಂತವಾಗಿರಬಹುದೇನೊ ಎಂದು ಒಳಕ್ಕೆ ಹೋದ ಅನುರಾಧಗೆ ಶಾಕ್ ಆಗಿದೆ. ಜೋರಾಗಿ ಕೂಗಿದ ನಂತರ ನೆರೆಹೊರೆಯವರು ಆಗಮಿಸಿದ್ದು, ಸುಬ್ಬಯ್ಯ ಅವರನ್ನು ಕೆಳಕ್ಕೆ ಇಳಿಸಿದ್ದಾರೆ. ಆದರೆ ಅಷ್ಟರೊಳಗೆ ಅವರ ಪ್ರಾಣಪಕ್ಷಿ ಹಾರಿಹೋಗಿದೆ.
ಒಂದು ನಿಮಿಷದ ಸಿಟ್ಟು ಒಂದು ಕುಟುಂಬವನ್ನು ಛಿದ್ರ ಮಾಡಿದೆ. ಎರಡು ಮಕ್ಕಳ ತಂದೆಯ ಪ್ರೀತಿಯನ್ನು ಕಸಿದುಕೊಂಡಿದೆ.



