ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಹಲ್ಗಾಮ್ ಅಟ್ಯಾಕ್ ಹೆಸರು ಕೇಳುತ್ತಿದ್ದಂತೆ ಯಾವ ಮುತ್ತೈದೆಗೂ ನಡುಕ ಹುಟ್ಟುತ್ತದೆ. ಒಂದು ವರ್ಷದ ಹಿಂದೆ ಇದೇ ದಿನದಂದು ಪಹಲ್ಗಾಮ್ ಸ್ವರ್ಗದಿಂದ ಸ್ಮಶಾನಕ್ಕೆ ಬದಲಾಗಿತ್ತು.
ಪಹಲ್ಗಾಮ್ ದಾಳಿಗೆ ಇಂದು ಒಂದು ವರ್ಷ ತುಂಬಿದೆ. ಪಹಲ್ಗಾಮ್‌ಗಾದ ಗಾಯಗಳು ನಿಧಾನಕ್ಕೆ ವಾಸಿಯಾಗುತ್ತಿದ್ದು, ಇಂದು ಮತ್ತದೇ ಪ್ರವಾಸಿಗರ ನಗು ಕೇಳುತ್ತಿದೆ.
ಪಹಲ್ಗಾಮ್ ದಾಳಿಯಲ್ಲಿ ಭಯೋತ್ಪಾದಕರು ಹಿಂದುಗಳನ್ನು ಹುಡುಕಿ ಹುಡುಕಿ ಕೊಂದಿದ್ದರು. ಹೆಂಡತಿಯರನ್ನು ನರಳಲು ಬಿಟ್ಟು ಅವರ ಕಣ್ಣೆದುರೇ ಪತಿಯರ ಹಣೆಗೆ ಗುಂಡಿಕ್ಕಿ ಕೊಂದರು. ಭಾರತವೂ ಇದಕ್ಕೆ ಪ್ರತೀಕಾರ ತೀರಿಸಿಕೊಂಡಿತ್ತು.
ಇದಾದ ಬಳಿಕ ಎಷ್ಟೋ ಸಮಯ ಪಹಲ್ಗಾಮ್ ಸ್ತಬ್ಧವಾಗಿತ್ತು. ಪಹಲ್ಗಾಮ್‌ಗೆ ಹೋಗಿ ನಮ್ಮ ಜಾಗಕ್ಕೆ ನಾವು ಹೋಗೋಕೆ ಯಾಕೆ ಭಯ ಎಂದು ಸರ್ಕಾರ ಎಷ್ಟೇ ಹುರಿದುಂಬಿಸಿದ್ದರೂ, ಬುಕ್ ಮಾಡಿದ ಟಿಕೆಟ್‌ಗಳನ್ನು ಪ್ರಯಾಣಿಕರು ಕ್ಯಾನ್ಸಲ್ ಮಾಡಿಕೊಂಡಿದ್ದರು.
ಆದರೆ ಸತತ ಪ್ರಯತ್ನ ಹಾಗೂ ಭದ್ರತೆಯ ಭರವಸೆ ನಂತರ ಪಹಲ್ಗಾಮ್‌ಗೆ ಜನ ಮತ್ತೆ ಭೇಟಿ ನೀಡಿದ್ದಾರೆ. ಇಂದು ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಹಿಂಡು ಕಾಣಿಸುತ್ತವೆ. ಎಲ್ಲೆಡೆ ನಗು, ಗೌಜಿ ಇದೆ. ಈ ಹಿಂದೆ ಇದ್ದದ್ದಕ್ಕಿಂತ ಹೆಚ್ಚು ಮಂದಿ ಈಗ ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ. ಇದು ಸಂಘರ್ಷದ ಮೇಲೆ ಶಾಂತಿಯ ಗೆಲುವು.
ಪ್ರವಾಸಿಗರಿಗೆ ಕ್ಯೂ ಆರ್ ಕೋಡ್ : ಪಹಲ್ಗಾಮ್‌ಗೆ ಭೇಟಿ ನೀಡುವ ಜನರ ಸುರಕ್ಷತೆಗಾಗಿ ಪ್ರತಿಯೊಬ್ಬರಿಗೂ ಒಂದೊಂದು ಕ್ಯೂ ಆರ್ ಕೋಡ್ ಆಧಾರಿತ ಐಡಿ ನೀಡಲಾಗುತ್ತದೆ. ಇದರಿಂದ ಅವರನ್ನು ತಕ್ಷಣ ಗುರುತಿಸಲಾಗುತ್ತದೆ. ಇನ್ನು ಬೈಸರನ್ ಹುಲ್ಲುಗಾವಲಿನಲ್ಲಿ ಯಾರ್ಯಾರೋ ಓಡಾಡುವಂತಿಲ್ಲ. ಕುದುರೆ ಸವಾರರು, ಗೈಡ್‌ಗಳು, ವ್ಯಾಪಾರಿಗಳು, ಪ್ರವಾಸಿಗರು ಎಲ್ಲರ ಕೊರಳಲ್ಲಿಯೂ ಐಡಿ ಕಾರ್ಡ್ ಇರುತ್ತದೆ. ಹೊರಗಿನವರಿಗೆ ಇಲ್ಲಿ ಜಾಗ ಇಲ್ಲ.



