October 14, 2026
Wednesday, October 14, 2026
spot_img

ಗ್ರಾಹಕರ ಮನೆ ಬಾಗಿಲಿಗೆ ನಾಯಿ ಮರಿ ಜೊತೆ ಬಂದ ಡೆಲಿವರಿ ಬಾಯ್:‌ ಬ್ಲಿಂಕಿಟ್ ಸಿಬ್ಬಂದಿಯ ಈ ಕಥೆಗೆ ನೆಟ್ಟಿಗರು ಫುಲ್ ಫಿದಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಇಂದಿನ ಜಗತ್ತಿನಲ್ಲಿ ಮಾನವೀಯತೆ ಇನ್ನು ಸತ್ತಿಲ್ಲ ಎಂಬುದನ್ನು ಸಾಬೀತುಪಡಿಸುವ   ಘಟನೆಯೊಂದು ವಾಣಿಜ್ಯ ನಗರಿ ಮುಂಬೈನಲ್ಲಿ ನಡೆದಿದೆ. ರಸ್ತೆ ಅಪಘಾತವೊಂದರಲ್ಲಿ   ಗಾಯಗೊಂಡು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಪುಟ್ಟ ನಾಯಿ ಮರಿಯೊಂದನ್ನು ರಕ್ಷಿಸಿದ ‘ಬ್ಲಿಂಕಿಟ್’ ಸಂಸ್ಥೆಯ ಡೆಲಿವರಿ ಪಾರ್ಟ್‌ನರ್ಸ್, ಅದಕ್ಕೆ ಸೂಕ್ತ ಚಿಕಿತ್ಸೆ ನೀಡಿ ಸಾಕಿ ಸಲಹುತ್ತಿದ್ದಾರೆ.

ವಿಶೇಷವೆಂದರೆ, ಈಗ ಸಂಪೂರ್ಣ ಗುಣಮುಖವಾಗಿರುವ ಆ ನಾಯಿ ಮರಿ, ಡೆಲಿವರಿ ಬಾಯ್ಸ್ ಜೊತೆಗೆ ಬೈಕ್ ಏರಿ ಗ್ರಾಹಕರ ಮನೆಗಳಿಗೆ ಆರ್ಡರ್ ತಲುಪಿಸಲು ಜೊತೆಯಾಗಿ ಸಾಗುತ್ತಿದೆ.

ಲಿಂಕ್ಡ್‌ಇನ್ ಪೋಸ್ಟ್ ಮೂಲಕ ಜಗತ್ತಿಗೆ ತಿಳಿದ ಕಥೆ

ಮುಂಬೈ ಮೂಲದ ಉದ್ಯೋಗಿ ರೋಷನ್ ಮ್ಹಾತ್ರೆ ಎಂಬುವವರು ಇತ್ತೀಚೆಗೆ ‘ಬ್ಲಿಂಕಿಟ್’ ಆ್ಯಪ್ ಮೂಲಕ ಕೆಲವು ದಿನಸಿ ವಸ್ತುಗಳನ್ನು ಆರ್ಡರ್ ಮಾಡಿದ್ದರು. ಕೇವಲ 15 ನಿಮಿಷಗಳಲ್ಲಿ ಅವರ ಮನೆ ಬಾಗಿಲಿಗೆ ಬಂದ ಡೆಲಿವರಿ ಬಾಯ್‌ನನ್ನು ನೋಡಿ ರೋಷನ್ ಅವರಿಗೆ ಆಶ್ಚರ್ಯ ಕಾಯುತ್ತಿತ್ತು. ಏಕೆಂದರೆ ಆ ರೈಡರ್‌ನ ಬೈಕ್ ಮುಂದೆ ಒಂದು ಮುದ್ದಾದ ಪುಟ್ಟ ನಾಯಿ ಮರಿ ಕುಳಿತಿತ್ತು. ಕುತೂಹಲ ತಡೆಯಲಾರದೆ ರೋಷನ್ ಅವರು, “ಏನಿದು ನಾಯಿ ಮರಿಯನ್ನು ಕರೆದುಕೊಂಡು ಬಂದಿದ್ದೀರಾ?” ಎಂದು ಪ್ರಶ್ನಿಸಿದಾಗ, ಆ ಡೆಲಿವರಿ ಬಾಯ್ ಹೇಳಿದ ಕಥೆ ರೋಷನ್ ಅವರ ಹೃದಯವನ್ನು ಗೆದ್ದಿತು.

ವೇರ್‌ಹೌಸ್‌ನಲ್ಲಿ ವಾಸ, ಬೈಕ್‌ನಲ್ಲಿ ಬ್ಯುಸಿ ರೈಡ್

ಆ ಡೆಲಿವರಿ ಬಾಯ್, “ಸರ್, ಕೆಲವು ದಿನಗಳ ಹಿಂದೆ ಈ ನಾಯಿ ಮರಿ ಕಾರಿನ ಚಕ್ರದ ಅಡಿಗೆ ಸಿಲುಕಿ ಗಂಭೀರ ಸ್ಥಿತಿಯಲ್ಲಿ ರಸ್ತೆಯಲ್ಲಿ ಬಿದ್ದಿತ್ತು. ಅದನ್ನು ನೋಡಿ ಮರುಗಿದ ನಮ್ಮ ಏರಿಯಾದ ಬ್ಲಿಂಕಿಟ್ ಡೆಲಿವರಿ ರೈಡರ್ಸ್ ಎಲ್ಲರೂ ಸೇರಿ ಹಣ ಹಾಕಿ ಅದಕ್ಕೆ ವೈದ್ಯಕೀಯ ಚಿಕಿತ್ಸೆ ಕೊಡಿಸಿ, ಪ್ರೀತಿಯಿಂದ ಆರೈಕೆ ಮಾಡಿ ಗುಣಪಡಿಸಿದೆವು. ಈಗ ಇದು ನಮ್ಮ ಬ್ಲಿಂಕಿಟ್ ವೇರ್‌ಹೌಸ್‌ನಲ್ಲೇ ವಾಸವಾಗಿದೆ. ನಾವು ಎಲ್ಲೇ ಡೆಲಿವರಿ ಮಾಡಲು ಹೋದರೂ ಇದು ನಮ್ಮ ಜೊತೆ ಬೈಕ್‌ನಲ್ಲಿ ಬರುತ್ತದೆ” ಎಂದು ಉತ್ತರಿಸಿದ್ದಾನೆ.

ಇದನ್ನೂ ಓದಿ:

ದತ್ತು ಸ್ವೀಕಾರಕ್ಕೆ ಹರಿದುಬಂದ ಆಫರ್

ರೋಷನ್ ಅವರು ಈ ಮುದ್ದಾದ ನಾಯಿ ಮರಿ ಮತ್ತು ಡೆಲಿವರಿ ಪಾರ್ಟ್‌ನರ್‌ನ ಫೋಟೋವನ್ನು ತಮ್ಮ ಲಿಂಕ್ಡ್‌ಇನ್ ಖಾತೆಯಲ್ಲಿ ಹಂಚಿಕೊಂಡಿದ್ದು, ಸದ್ಯ ಇದು ಇಂಟರ್ನೆಟ್‌ನಲ್ಲಿ ಭಾರೀ ವೈರಲ್ ಆಗಿದೆ. ನೆಟ್ಟಿಗರು ಡೆಲಿವರಿ ಬಾಯ್ಸ್‌ನ ಈ ಗುಣಕ್ಕೆ ತಲೆಬಾಗಿದ್ದು, “ಈ ಪೋಸ್ಟ್ ಇವತ್ತಿನ ನಮ್ಮ ದಿನವನ್ನು ಅತ್ಯಂತ ಸುಂದರವಾಗಿಸಿತು” ಎಂದು ಕಮೆಂಟ್ ಮಾಡುತ್ತಿದ್ದಾರೆ. ಈ ವಿಡಿಯೋ ಮತ್ತು ಫೋಟೋ ಎಷ್ಟು ಪ್ರಭಾವ ಬೀರಿದೆ ಎಂದರೆ, ಸಾಮಾಜಿಕ ಜಾಲತಾಣದ ಬಳಕೆದಾರರೊಬ್ಬರು ಆ ನಾಯಿ ಮರಿಯನ್ನು ಅಧಿಕೃತವಾಗಿ ದತ್ತು ತೆಗೆದುಕೊಳ್ಳಲು ಮುಂದೆ ಬಂದಿದ್ದು, ಆ ಬ್ಲಿಂಕಿಟ್ ವೇರ್‌ಹೌಸ್‌ನ ವಿಳಾಸ ಹಾಗೂ ಡೆಲಿವರಿ ಪಾರ್ಟ್‌ನರ್‌ನ ಫೋನ್ ನಂಬರ್ ನೀಡುವಂತೆ ಕೋರಿದ್ದಾರೆ. ಶೋಷಿತ ಪ್ರಾಣಿಯೊಂದರ ಮೇಲಿನ ಈ ಮನುಷ್ಯರ ಪ್ರೀತಿ ನಿಜಕ್ಕೂ ಶ್ಲಾಘನೀಯ.

Must Read