ಹೊಸ ದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡು ಚುನಾವಣಾ ಪ್ರಚಾರದ ಭರದಲ್ಲಿ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಪ್ರಧಾನಿ ಮೋದಿ ಅವರ ವಿರುದ್ಧ ನಾಲಿಗೆ ಹರಿಬಿಟ್ಟಿದ್ದು, ಎಲ್ಲೆಡೆ ಆಕ್ರೋಶಕ್ಕೆ ಕಾರಣವಾಗಿದೆ. ಖರ್ಗೆ ಮಾತಿನ ವಿರುದ್ಧ ಬಿಜೆಪಿ ನಾಯಕರು ಕೆಂಡಾಮಂಡಲವಾಗಿದ್ದು, ಇದು ಅಹಂಕಾರದ ಪರಮಾವಧಿ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಗುಡುಗಿದ್ದಾರೆ.
ದೇಶದ ಪ್ರಧಾನಿಯಾಗಿರುವ ಮೋದಿ ಅವರನ್ನು ಟೀಕಿಸುವ ಭರದಲ್ಲಿ ಭಯೋತ್ಪಾದಕ ಎಂಬ ಪದದ ಬಳಸಿರುವುದು ಕೋಟ್ಯಂತರ ಭಾರತೀಯರಿಗೆ ಮಾಡಿದ ಅಪಮಾನವಾಗಿದೆ. ಕೇವಲ ತಮ್ಮವರನ್ನು ಮೆಚ್ಚಿಸುವ ಉದ್ದೇಶದಿಂದ ತಮ್ಮ ಗೌರವನ್ನು ಕಳೆದುಗೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಪಕ್ಷವು ಚುನಾವಣೆ ಬಂದಾಗಲೆಲ್ಲ ಈ ರೀತಿಯ ಹೇಳಿಕೆ ನೀಡುವುದು ಅಭ್ಯಾಸ ಮಾಡಿ ಬಿಟ್ಟಿದೆ. ಆದರೆ ಕಾಂಗ್ರೆಸ್ ನ ಈ ದುರಭ್ಯಾಸಕ್ಕೆ ಜನರು ನಿರಂತರ ಪಾಠ ಕಳಿಸುತ್ತಲೇ ಬಂದಿದ್ದಾರೆ. ಆದರೂ ಇನ್ನೂ ಕೂಡ ತಮ್ಮ ತಪ್ಪನ್ನು ತಿದ್ದಿಕೊಳ್ಳದ್ದೇ ಇಂತಹ ವರ್ತನೆ ತೋರುವುದು ನಿಮ್ಮ ಅಹಂಕಾರಕ್ಕೆ ಹಿಡಿದ ಕೈಕನ್ನಡಿ ಎಂದು ಆಕ್ರೋಶ ಹೊರಹಾಕಿದರು.
ಇಂದು ಇಡೀ ಜಗತ್ತೇ ಪ್ರಧಾನಿ ಮೋದಿ ಅವರನ್ನು ಮೆಚ್ಚುಕೊಳ್ಳುತ್ತಿದೆ. ವಿಶ್ವದ 26ಕ್ಕೂ ಅಧಿಕ ರಾಷ್ಟ್ರಗಳು ತಮ್ಮ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳನ್ನು ನೀಡಿ ಮೋದಿ ಅವರಿಗೆ ನೀಡಿ ಗೌರವಿಸಿವೆ. ಈ ಮೂಲಕ ಇಡೀ ಜಗತ್ತು ಭಾರತದತ್ತ ಹೆಮ್ಮೆಯಿಂದ ನೋಡುತ್ತಿರುವಾಗ, ನಿಮ್ಮ ಕೀಳುಮಟ್ಟದ ಮಾತು ನಿಮ್ಮ ಮನಸ್ಥಿತಿಯನ್ನು ಮತ್ತು ರಾಜಕೀಯ ಹತಾಶೆಯನ್ನು ಸಾಬೀತುಪಡಿಸಿದೆ. ಈ ರೀತಿಯ ಮಾತುಗಳಿಂದ ನಿಮ್ಮ ಘನತೆಯನ್ನು ಕಳೆದುಕೊಂಡಿದ್ದೀರಿ. ಈ ನಾಡಿನ ಜನತೆ ಇಂದಿಗೂ ನಿಮ್ಮನ್ನು ಕ್ಷಮಿಸುವುದಿಲ್ಲ. ಕೂಡಲೇ ಬೇಜವಾಬ್ದಾರಿ ಹೇಳಿಕೆಗೆ ದೇಶದ ಜನರಲ್ಲಿ ಕ್ಷಮೆ ಯಾಚಿಸಬೇಕು ಎಂದು ಬಿಎಸ್ ಯಡಿಯೂರಪ್ಪ ಅವರು ಆಗ್ರಹಿಸಿದ್ದಾರೆ.



