April 21, 2026
Tuesday, April 21, 2026
spot_img

ಕುಂದಾನಗರಿಯಲ್ಲಿ ತಿರುಮಲ ತಿರುಪತಿ ಮಾದರಿಯ ಭವ್ಯ ಮಂದಿರ ನಿರ್ಮಾಣ

ಹೊಸದಿಗಂತ ವರದಿ ಬೆಳಗಾವಿ :

ಇಲ್ಲಿನ ಸದಾಶಿವನಗರದ ರೆಡ್ಡಿ ಭವನದಲ್ಲಿ ಮಂಗಳವಾರ ಬೆಳಗಾವಿ ರೆಡ್ಡಿ ಸಂಘವು ಬೆಳಗಾವಿ ನಗರದ ಹೊರವಲಯದಲ್ಲಿ ಏಳು ಎಕರೆ ಪ್ರದೇಶದಲ್ಲಿ ಬೃಹತ್ ವೆಂಕಟೇಶ್ವರ ದೇವಸ್ಥಾನ ಕಟ್ಟಲು ಆಂಧ್ರಪ್ರದೇಶದ ತಿರುಮಲ ತಿರುಪತಿ ದೇವಸ್ಥಾನ ಆಡಳಿತ ಮಂಡಳಿ (ಟಿಟಿಡಿ) ಭೂಮಿ ಹಸ್ತಾಂತರ ಕಾರ್ಯಕ್ರಮ ಜರುಗಿತು.

ಮಂಗಳವಾರ ನರದ ಶದಾಶಿವ ನಗರದ ರೆಡ್ಡಿ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಆಡಳಿತ ಮಂಡಳಿಗೆ ಭೂಮಿ ಹಸ್ತಾಂತರ, ದೇವಸ್ಥಾನ ನಿರ್ಮಾಣ ಕುರಿತು ಮಹತ್ವದ ಮಾಹಿತಿ ಹಂಚಿಕೊಳ್ಳಲಾಯಿತು.

ಟಿಟಿಡಿ ಆಡಳಿತ ಮಂಡಳಿಯ ಸದಸ್ಯರಾದ ಎಸ್. ನರೇಶ್ ಕುಮಾರ್ ಮಾತನಾಡಿ, ದೇವಸ್ಥಾನ ನಿರ್ಮಾಣಕ್ಕಾಗಿ ಬೆಳಗಾವಿ ರೆಡ್ಡಿ ಸಂಘವು ಸದಭಿಪ್ರಾಯದಿಂದ ಸುಮಾರು 7 ಎಕರೆ ಭೂಮಿಯನ್ನು ಹಸ್ತಾಂತರ ಮಾಡಿರುವುದು ಶ್ಲಾಘನೀಯ ಕ್ರಮವಾಗಿದೆ ಎಂದರು. ಮುಂದಿನ ಎರಡು ವರ್ಷಗಳಲ್ಲಿ ಸುಮಾರು ₹100 ಕೋಟಿ ವೆಚ್ಚದಲ್ಲಿ ದೇವಸ್ಥಾನ ನಿರ್ಮಾಣಗೊಳ್ಳಲಿದ್ದು, ಇದರಲ್ಲಿ ಶೇ.80ರಷ್ಟು ಅನುದಾನವನ್ನು ಟಿಟಿಡಿ ಒದಗಿಸಲಿದ್ದು, ಶೇ.10ರಷ್ಟು ರೆಡ್ಡಿ ಸಂಘ ಹಾಗೂ ಉಳಿದ ಶೇ.10ರಷ್ಟು ದಾನಿಗಳಿಂದ ಸಂಗ್ರಹಿಸಲಾಗುವುದು ಎಂದು ವಿವರಿಸಿದರು.

ಕರ್ನಾಟಕದ ದಾನಿಗಳ ಸಹಕಾರದಿಂದಲೇ ದೇವಸ್ಥಾನ ನಿರ್ಮಾಣ ಮಾಡುವ ಸಂಕಲ್ಪ ಕೈಗೊಂಡಿರುವುದಾಗಿ ತಿಳಿಸಿದ ಅವರು, ಮೂರು ರಾಜ್ಯಗಳ ಕೇಂದ್ರಸ್ಥಾನವಾಗಿರುವ ಬೆಳಗಾವಿ ನಗರದ ಹೊರವಲಯದಲ್ಲಿ ತಿರುಮಲ ವೆಂಕಟರಮಣ ದೇವಸ್ಥಾನ ನಿರ್ಮಾಣವಾಗುವುದರಿಂದ ಭಕ್ತರಿಗೆ ಹೆಚ್ಚಿನ ಅನುಕೂಲ ಕಲ್ಪಿಸಲಿದೆ ಎಂದು ಹೇಳಿದರು.

ಮಹಾರಾಷ್ಟ್ರದ ಕೊಲ್ಲಾಪುರದಲ್ಲಿರುವ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರಿಗೆ ಕೂಡ ಈ ದೇವಸ್ಥಾನದಿಂದ ಹೆಚ್ಚಿನ ಸೌಲಭ್ಯ ದೊರೆಯಲಿದೆ. ತಿರುಪತಿಯಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳನ್ನು ಇದೇ ಮಾದರಿಯಲ್ಲಿ ಇಲ್ಲಿ ಸಹ ಆಯೋಜಿಸಲಾಗುವುದು. ಭಕ್ತರಿಗೆ ವಸತಿ, ಪ್ರಸಾದ (ಲಾಡು) ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸಲಾಗುತ್ತದೆ ಎಂದು ಹೇಳಿದರು.
ಇದಲ್ಲದೆ, ಟಿಟಿಡಿ ಸಂಸ್ಥೆ ದೇವಸ್ಥಾನಗಳ ನಿರ್ಮಾಣ ಮತ್ತು ಪುನರುಜ್ಜೀವನಕ್ಕಾಗಿ ಸುಮಾರು ₹9,000 ಕೋಟಿ ಮೊತ್ತವನ್ನು ಮೀಸಲಿಟ್ಟಿದ್ದು, ದೇಶದ ಆರು ಕಡೆಗಳಲ್ಲಿ ಟಿಟಿಡಿ ದೇವಸ್ಥಾನಗಳು ಕಾರ್ಯನಿರ್ವಹಿಸುತ್ತಿವೆ ಎಂದು ಮಾಹಿತಿ ನೀಡಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !