ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಬಂಗಾಳ ಹಾಗೂ ತಮಿಳುನಾಡಿನಲ್ಲಿ ನಾಳೆ ಮತದಾನ ನಡೆಯಲಿದ್ದು, ಇತ್ತ ಚುನಾವಣಾ ಆಯೋಗ ಭರ್ಜರಿ ಕಾರ್ಯಾಚರಣೆ ನಡೆಸುವ ಮೂಲಕ ಅಕ್ರಮವಾಗಿ ಸಾಗಿಸುತ್ತಿದ್ದ 1,072.13 ಕೋಟಿ ರೂಪಾಯಿ ಮೌಲ್ಯದ ನಗದು, ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದೆ.
ಈ ಕುರಿತು ಮಾಹಿತಿ ನೀಡಿದ ಕೇಂದ್ರ ಚುನಾವಣಾ ಆಯೋಗ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ. ಎರಡು ರಾಜ್ಯಗಳಲ್ಲಿ ಅಧಿಕಾರಿಗಳು ಹದ್ದಿನ ಕಣ್ಣಿಟ್ಟಿದ್ದು, ಬರೋಬ್ಬರಿ1,072.13 ಕೋಟಿ ರೂ. ಮೌಲ್ಯದ ನಗದು, ಮದ್ಯ, ಮಾದಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದೆ.
ತಮಿಳುನಾಡಿನಲ್ಲಿ ಚುನಾವಣಾ ಆಯೋಗ ಕಾರ್ಯಾಚರಣೆ ನಡೆಸಿ, 100.19 ಕೋಟಿ ನಗದು, 3.85 ಕೋಟಿ ಮೌಲ್ಯದ ಮದ್ಯ, 76.72 ಕೋಟಿಯ ಮಾದಕ ವಸ್ತು, 159.31 ಕೋಟಿಯ ಅಮೂಲ್ಯ ಲೋಹಗಳು ಹಾಗೂ 259.14 ಕೋಟಿ ಮೌಲ್ಯದ ಉಚಿತವಾಗಿ ಹಂಚಲು ಸಾಗಿಸುತ್ತಿದ್ದ ವಸ್ತುಗಳನ್ನು ಪತ್ತೆ ಹಚ್ಚಲಾಗಿದ್ದು, ಈ ಮೂಲಕ ಒಟ್ಟು 599.24 ಕೋಟಿ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದೆ.
ಪಶ್ಚಿಮ ಬಂಗಾಳದಲ್ಲೂ ಕೂಡ ಆಯೋಗವು, 27.48 ಕೋಟಿ ನಗದು, 102.45 ಕೋಟಿ ಮೌಲ್ಯದ ಮದ್ಯ, 108.11 ಕೋಟಿಯ ಮಾದಕ ವಸ್ತುಗಳು, 55.88 ಕೋಟಿಯ ಅಮೂಲ್ಯ ಲೋಹಗಳು ಹಾಗೂ 178.83 ಕೋಟಿ ಮೌಲ್ಯದ ಉಚಿತವಾಗಿ ಹಂಚಲು ಸಾಗಿಸುತ್ತಿದ್ದ ವಸ್ತುಗಳನ್ನು ವಶಕ್ಕೆ ಪಡೆದಿದ್ದು, ಈ ಮೂಲಕ ಒಟ್ಟು 472.89 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.



