April 23, 2026
Thursday, April 23, 2026
spot_img

ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾದ ಟ್ರಂಪ್‌: ‘ಮೋದಿ ನನ್ನ ಬೆಸ್ಟ್ ಫ್ರೆಂಡ್’ ಎಂದಿದ್ದೇಕೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕದ ಜನ್ಮಸಿದ್ಧ ಪೌರತ್ವ ಕಾನೂನಿನ ಕುರಿತಾದ ಚರ್ಚೆ ಈಗ ಭಾರತ ಮತ್ತು ಅಮೆರಿಕದ ನಡುವೆ ರಾಜತಾಂತ್ರಿಕ ಸಂಚಲನ ಮೂಡಿಸಿದೆ. ರಾಜಕೀಯ ವಿಶ್ಲೇಷಕ ಮೈಕಲ್ ಸ್ಯಾವೇಜ್ ಅವರ ವಿವಾದಾತ್ಮಕ ಹೇಳಿಕೆಯನ್ನು ಬೆಂಬಲಿಸುವ ಮೂಲಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಇತ್ತೀಚೆಗೆ ನಡೆದ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ್ದ ರೇಡಿಯೋ ಜಾಕಿ ಮೈಕಲ್ ಸ್ಯಾವೇಜ್, ಭಾರತ ಮತ್ತು ಚೀನಾದಂತಹ ದೇಶಗಳಿಂದ ಮಹಿಳೆಯರು ಗರ್ಭಿಣಿಯಾದ 9 ತಿಂಗಳ ನಂತರ ಅಮೆರಿಕಕ್ಕೆ ಬರುತ್ತಾರೆ. ಇಲ್ಲಿ ಮಗುವಿಗೆ ಜನ್ಮ ನೀಡುವ ಮೂಲಕ ಮಗುವಿಗೆ ಅಮೆರಿಕದ ಪೌರತ್ವ ಪಡೆದುಕೊಳ್ಳುತ್ತಾರೆ. ನಂತರ ತಮ್ಮ ಸಂಬಂಧಿಕರನ್ನೂ ಈ ‘ನರಕ’ ಸದೃಶ್ಯ ದೇಶಗಳಿಂದ ಅಮೆರಿಕಕ್ಕೆ ಕರೆಸಿಕೊಳ್ಳುತ್ತಾರೆ ಎಂದು ಜನಾಂಗೀಯ ನಿಂದನೆ ಮಾಡಿದ್ದರು. ಅಷ್ಟೇ ಅಲ್ಲದೆ, ಭಾರತೀಯ ಮತ್ತು ಚೀನೀ ವಲಸಿಗರನ್ನು “ಲ್ಯಾಪ್‌ಟಾಪ್‌ಗಳನ್ನು ಹೊಂದಿರುವ ದರೋಡೆಕೋರರು” ಎಂದು ಕಟುವಾಗಿ ಟೀಕಿಸಿದ್ದರು.

ಈ ವಿವಾದಾತ್ಮಕ ವಿಡಿಯೋವನ್ನು ಡೊನಾಲ್ಡ್ ಟ್ರಂಪ್ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡು, ಈ ಹೇಳಿಕೆಗೆ ತಮ್ಮ ಸಹಮತ ಸೂಚಿಸಿದ್ದರು. ಇದು ಅನಿವಾಸಿ ಭಾರತೀಯರಲ್ಲಿ ಮತ್ತು ಭಾರತದ ರಾಜಕೀಯ ವಲಯದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು.

ತಮ್ಮ ಹೇಳಿಕೆಯಿಂದ ಉಂಟಾದ ನಕಾರಾತ್ಮಕ ಪರಿಣಾಮವನ್ನು ಅರಿತ ಟ್ರಂಪ್, ತಕ್ಷಣವೇ ಭಾರತವನ್ನು ಹೊಗಳುವ ಮೂಲಕ ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನಿಸಿದ್ದಾರೆ. “ಭಾರತ ಒಂದು ಅತ್ಯುತ್ತಮ ದೇಶ. ಅಲ್ಲಿ ನನ್ನ ಆತ್ಮೀಯ ಗೆಳೆಯ (ಪ್ರಧಾನಿ ಮೋದಿ) ದೇಶವನ್ನು ಮುನ್ನಡೆಸುತ್ತಿದ್ದಾರೆ” ಎಂದು ಹೇಳುವ ಮೂಲಕ ಭಾರತದೊಂದಿಗಿನ ಸಂಬಂಧವನ್ನು ಸ್ಮರಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ನವದೆಹಲಿಯಲ್ಲಿರುವ ಯುಎಸ್ ರಾಯಭಾರ ಕಚೇರಿಯ ವಕ್ತಾರ ಕ್ರಿಸ್ಟೋಫರ್ ಎಲ್ಮ್ಸ್, “ಅಧ್ಯಕ್ಷ ಟ್ರಂಪ್ ಅವರು ಭಾರತದ ಬಗ್ಗೆ ಅಪಾರ ಗೌರವ ಮತ್ತು ಪ್ರೀತಿಯನ್ನು ಹೊಂದಿದ್ದಾರೆ. ಭಾರತವನ್ನು ಅವರು ಪ್ರಬಲ ರಾಷ್ಟ್ರವೆಂದು ಪರಿಗಣಿಸುತ್ತಾರೆ. ಪ್ರಧಾನಿ ಮೋದಿ ಅವರೊಂದಿಗೆ ಅವರು ಉತ್ತಮ ವೈಯಕ್ತಿಕ ಸ್ನೇಹವನ್ನು ಹೊಂದಿದ್ದಾರೆ” ಎಂದು ಸ್ಪಷ್ಟಪಡಿಸಿದ್ದಾರೆ.

ಜನ್ಮಸಿದ್ಧ ಪೌರತ್ವ ಕಾನೂನಿನಲ್ಲಿ ಬದಲಾವಣೆ ತರಬೇಕೆಂದು ಟ್ರಂಪ್ ಮೊದಲಿನಿಂದಲೂ ವಾದಿಸುತ್ತಿದ್ದಾರೆ. ಆದರೆ ಭಾರತದಂತಹ ಮಿತ್ರ ರಾಷ್ಟ್ರಗಳ ಬಗ್ಗೆ ಇಂತಹ ಕಟು ಶಬ್ದಗಳ ಬಳಕೆಯು ಉಭಯ ದೇಶಗಳ ನಡುವಿನ ಸಂಬಂಧದಲ್ಲಿ ಅಸಮಾಧಾನ ಮೂಡಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !