October 10, 2026
Saturday, October 10, 2026
spot_img

ಅಭ್ಯಾಸದ ವೇಳೆ ಮುಖಕ್ಕೆ ಬಡಿದ ಚೆಂಡು: ಯುವ ಆಟಗಾರನಿಗೆ ಗಂಭೀರ ಗಾಯ, ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಆತಂಕ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ ಹಂಗಾಮದ ಮಧ್ಯೆ ಡೆಲ್ಲಿ ಕ್ಯಾಪಿಟಲ್ಸ್ ಶಿಬಿರದಲ್ಲಿ ಆತಂಕ ಮೂಡಿಸುವ ಘಟನೆ ನಡೆದಿದೆ. ತಂಡದ ಯುವ ಬ್ಯಾಟರ್ ಸಾಹಿಲ್ ಪರಾಖ್ ಅಭ್ಯಾಸದ ವೇಳೆ ಚೆಂಡು ಮುಖಕ್ಕೆ ಬಡಿದು ಗಾಯಗೊಂಡಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆ ಆಟಗಾರರು ಮತ್ತು ಅಭಿಮಾನಿಗಳಲ್ಲಿ ಚಿಂತೆಗೆ ಕಾರಣವಾಗಿದೆ.

ಶುಕ್ರವಾರ ಸಂಜೆ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ತರಬೇತಿ ಅವಧಿಯಲ್ಲಿ ಸಾಹಿಲ್ ನೆಟ್ಸ್‌ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರು. ಇದೇ ವೇಳೆ ವೇಗದ ಬೌಲರ್ ಎಸೆದ ಎತ್ತರದ ಬೌನ್ಸರ್‌ನ್ನು ಸರಿಯಾಗಿ ಎದುರಿಸಲು ಸಾಧ್ಯವಾಗದೆ, ಚೆಂಡು ಹೆಲ್ಮೆಟ್ ಗ್ರಿಲ್ ನಡುವಿನಿಂದ ಮುಖಕ್ಕೆ ಬಲವಾಗಿ ಬಡಿದಿದೆ ಎನ್ನಲಾಗಿದೆ. ಹೊಡೆತದ ತೀವ್ರತೆಗೆ ಸಾಹಿಲ್ ಕ್ಷಣಾರ್ಧದಲ್ಲೇ ನೆಲಕ್ಕುರುಳಿದರು.

ಮುಖಕ್ಕೆ ಗಂಭೀರ ಪೆಟ್ಟು ಬಿದ್ದ ಪರಿಣಾಮ ರಕ್ತಸ್ರಾವ ಉಂಟಾಗಿದ್ದು, ತಕ್ಷಣ ವೈದ್ಯಕೀಯ ಸಿಬ್ಬಂದಿ ಮೈದಾನಕ್ಕಿಳಿದು ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ಬಳಿಕ ಸ್ಟ್ರೆಚರ್ ಮೂಲಕ ಅವರನ್ನು ಹೊರತೆಗೆದು ಆಂಬ್ಯುಲೆನ್ಸ್‌ನಲ್ಲಿ ಸಮೀಪದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ.

ಪ್ರತಿಭಾವಂತ ಬ್ಯಾಟರ್ ಆಗಿ ಗುರುತಿಸಿಕೊಂಡಿರುವ ಅವರ ಆರೋಗ್ಯದ ಬಗ್ಗೆ ತಂಡದ ಅಧಿಕೃತ ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ.

Must Read