ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-2ನಲ್ಲಿ ಮತ್ತೊಂದು ವಿಶಿಷ್ಟ ಕಲಾ ಸಂಕೇತ ಸೇರ್ಪಡೆಯಾಗಿದೆ.
ವಿಶ್ವಪ್ರಸಿದ್ಧ ಶಿಲ್ಪಕಲಾವಿದ ಜೌಮ್ ಪ್ಲೆನ್ಸಾ ವಿನ್ಯಾಸಗೊಳಿಸಿರುವ 16 ಅಡಿ ಎತ್ತರದ ‘ಬೆಂಗಳೂರುಸ್ ಸೋಲ್’ ಶಿಲ್ಪಕಲೆ ಅಧಿಕೃತವಾಗಿ ಅನಾವರಣಗೊಂಡಿದ್ದು, ನಗರದ ಸಾಂಸ್ಕೃತಿಕ ವೈಭವ ಮತ್ತು ಜಾಗತಿಕ ಸ್ಪಂದನೆಯನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸುವ ಹೊಸ ಆಕರ್ಷಣೆಯಾಗಿ ಹೊರಹೊಮ್ಮಿದೆ.
ವಿವಿಧ ಭಾಷೆಗಳ ಅಕ್ಷರಗಳು, ಗಣಿತದ ಸಂಕೇತಗಳು ಮತ್ತು ಕಲಾತ್ಮಕ ವಿನ್ಯಾಸಗಳನ್ನು ಒಟ್ಟುಗೂಡಿಸಿ ರೂಪಿಸಿರುವ ಈ ಶಿಲ್ಪ, ಬೆಂಗಳೂರಿನ ವೈವಿಧ್ಯಮಯ ಸಂಸ್ಕೃತಿ ಹಾಗೂ ಸೃಜನಶೀಲತೆಯ ಪ್ರತಿರೂಪವಾಗಿದೆ. ಕನ್ನಡ ಸೇರಿದಂತೆ ಜಗತ್ತಿನ ಹಲವು ಭಾಷೆಗಳ ಅಕ್ಷರಗಳನ್ನು ಒಳಗೊಂಡಿರುವುದು ಈ ಕಲಾಕೃತಿಯ ವಿಶೇಷತೆ. ಅಕ್ಷರಗಳ ಹೆಣೆಯುವಿಕೆಯ ಮೂಲಕ ಏಕತೆ, ಜ್ಞಾನ ಮತ್ತು ಸಂವಹನದ ಸಂದೇಶವನ್ನು ಸಾರುವ ಪ್ರಯತ್ನ ಇಲ್ಲಿದೆ.
ಬಯೋಕಾನ್ ಫೌಂಡೇಶನ್ ಸಹಯೋಗದಲ್ಲಿ ನಿರ್ಮಾಣಗೊಂಡಿರುವ ಈ ಶಿಲ್ಪಕಲೆ, ನಗರ ಸ್ಥಳಗಳಿಗೆ ಕಲೆಯ ಮೂಲಕ ಹೊಸ ಅರ್ಥ ನೀಡುವ ಉದ್ದೇಶ ಹೊಂದಿದೆ. ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ಕಲಾಕೃತಿಗಳು ಜನರಿಗೆ ಭಾವನಾತ್ಮಕ ಸಂಪರ್ಕ ಕಲ್ಪಿಸುವುದರ ಜೊತೆಗೆ ನಗರಕ್ಕೆ ವಿಶಿಷ್ಟ ಗುರುತು ನೀಡುತ್ತವೆ ಎಂದು ಆಯೋಜಕರು ಅಭಿಪ್ರಾಯಪಟ್ಟಿದ್ದಾರೆ.
ಜಗತ್ತಿನ ಅನೇಕ ಮಹಾನಗರಗಳಲ್ಲಿ ತಮ್ಮ ಕಲಾಕೃತಿಗಳ ಮೂಲಕ ಹೆಸರಾಗಿರುವ ಜೌಮ್ ಪ್ಲೆನ್ಸಾ, ಇದೀಗ ಬೆಂಗಳೂರಿಗೂ ವಿಶಿಷ್ಟ ಕಲಾ ಕೊಡುಗೆ ನೀಡಿದ್ದಾರೆ. ಟರ್ಮಿನಲ್-2ಗೆ ಆಗಮಿಸುವ ಪ್ರಯಾಣಿಕರಿಗೆ ಈ ಭವ್ಯ ಶಿಲ್ಪ ಹೊಸ ಫೋಟೋ ಸ್ಪಾಟ್ ಆಗಿ, ನಗರದ ಆಧುನಿಕ ಸಾಂಸ್ಕೃತಿಕ ಮುಖವನ್ನೇ ಪರಿಚಯಿಸುತ್ತಿದೆ.



