October 15, 2026
Thursday, October 15, 2026
spot_img

ಭಾರತೀಯ ನೌಕಾಪಡೆಗೆ ಸ್ವದೇಶಿ ಯುದ್ಧನೌಕೆಯ ಬಲ: ಅ.16ರಂದು ಕಾರವಾರದಲ್ಲಿ ‘ಸಮರ್ಥಕ್’ ಸಮರ್ಪಣೆ

ಹೊಸದಿಗಂತ ವರದಿ ಕಾರವಾರ:

ಭಾರತೀಯ ನೌಕಾಪಡೆಗೆ ನೂತನ ಸಮರ್ಥಕ್ ಯುದ್ಧನೌಕೆಯ ಅಧಿಕೃತ ಸಮರ್ಪಣಾ ಕಾರ್ಯಕ್ರಮ ಅಕ್ಟೋಬರ್ 16 ರಂದು ಇಲ್ಲಿನ ಅರ್ಗಾದ ಕದಂಬ ನೌಕಾನೆಲೆಯಲ್ಲಿ ನಡೆಯಲಿದ್ದು ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಅವರು ಪಾಲ್ಗೊಂಡು ಅತ್ಯಾಧುನಿಕ ಯುದ್ಧನೌಕೆಯನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಕರ್ನಾಟಕದ ರಾಜ್ಯಪಾಲ ಡಾ.ಸುಧಾ ಯಾದವ್ ಅವರ ಉಪಸ್ಥಿತಿ ಇರಲಿದೆ. ಗೋವಾ ವಿಮಾನ ನಿಲ್ದಾಣಕ್ಕೆ ಆಗಮಿಸುವ ಉಪರಾಷ್ಟ್ರಪತಿಗಳು ಅಲ್ಲಿಂದ ವಿಶೇಷ ಹೆಲಿಕಾಪ್ಟರ್ ಮೂಲಕ ಕದಂಬ ನೌಕಾನೆಲೆಗೆ ಆಗಮಿಸಲಿದ್ದು ಬೆಳಿಗ್ಗೆ 11.30 ರಿಂದ ಸಮರ್ಥಕ್ ಯುದ್ಧನೌಕೆ ಸಮರ್ಪಣಾ ಕಾರ್ಯಕ್ರಮ ನಡೆಯಲಿದೆ.

ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕಾರವಾರ ಸುತ್ತ ಮುತ್ತಲಿನ ಕಡಲ ತೀರ ಪ್ರದೇಶಗಳಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಸುರಕ್ಷತೆಯ ದೃಷ್ಟಿಯಿಂದ ಅಕ್ಟೋಬರ 16 ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆ ನಡುವಿನ ಅವಧಿಯಲ್ಲಿ ಅಂಕೋಲಾ ತಾಲೂಕಿನ ಹಾರವಾಡದಿಂದ ಕಾರವಾರದ ಮಾಜಾಳಿವರೆಗಿನ ವ್ಯಾಪ್ತಿಯ ಕಡಲ ತೀರಗಳಲ್ಲಿ ಮೀನುಗಾರಿಕೆಗೆ ಸಂಬಂಧಿಸಿದ ಚಟುವಟಿಕೆಗಳಿಗೆ ನಿರ್ಬಂಧ ಹೇರಲಾಗಿದ್ದು ಮೀನುಗಾರಿಕೆಯನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ.

ಮೇಕ್ ಇನ್ ಇಂಡಿಯಾ,ಆತ್ಮ ನಿರ್ಭರ ಭಾರತ ಅಭಿಯಾನದ ಅಡಿಯಲ್ಲಿ ಸ್ವದೇಶಿ ನಿರ್ಮಿತ ಸಮರ್ಥಕ್ ಯುದ್ಧನೌಕೆ 107 ಮೀಟರ್ ಉದ್ದವಿದ್ದು 3750 ಟನ್ ತೂಕ ಹೊಂದಿದೆ.

ಕಡಲ ಅಲೆಗಳಿಂದ ಮೇಲೆಳುತ್ತಿರುವ ಆನೆಯ ಲಾಂಛನ ಹೊಂದಿರುವ ಈ ಯುದ್ಧನೌಕೆ ಕಡಲ ತೀರದ ಗಸ್ತು ತಿರುಗುವ ಮತ್ತು ಕಣ್ಗಾವಲು ಇರಿಸುವುದು, ಅಗತ್ಯ ಸಂದರ್ಭಗಳಲ್ಲಿ ತುರ್ತು ಮಾನವೀಯ ನೆರವು ಒದಗಿಸುವದು,ಮಾನವ ರಹಿತ ನೌಕಾ ವಾಹನಗಳ ಮಾತೃನೌಕೆಯಾಗಿ ಕಾರ್ಯನಿರ್ವಹಿಸುವ ಉದ್ದೇಶಗಳನ್ನು ಹೊಂದಿದೆ.

Must Read