April 26, 2026
Sunday, April 26, 2026
spot_img

ಗುಜರಾತ್ ವಿರುದ್ಧ ಸಿಎಸ್‌ಕೆ ಬ್ಯಾಟಿಂಗ್ ಕುಸಿತ: ಫ್ಲಾಪ್ ಆದ ಇಂಪ್ಯಾಕ್ಟ್ ಪ್ಲೇಯರ್ ತಂತ್ರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ 2026ರ 37ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತನ್ನ ತವರು ಮೈದಾನವಾದ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಸಂಕಷ್ಟಕ್ಕೆ ಸಿಲುಕಿದೆ. ಗುಜರಾತ್ ಟೈಟಾನ್ಸ್ ವಿರುದ್ಧದ ಈ ಹೈವೋಲ್ಟೇಜ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್‌ಕೆ, ಆರಂಭಿಕ ಹಂತದಲ್ಲೇ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ಗುಜರಾತ್ ಬೌಲರ್‌ಗಳ ಸಂಘಟಿತ ದಾಳಿಗೆ ಸಿಲುಕಿದ ಚೆನ್ನೈ, ಪವರ್‌ಪ್ಲೇ ಮುಗಿಯುವ ಮೊದಲೇ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡಿತು.

ಸಿಎಸ್‌ಕೆ ತಂಡಕ್ಕೆ ಭರ್ಜರಿ ಆರಂಭ ನೀಡುವ ನಿರೀಕ್ಷೆಯಲ್ಲಿದ್ದ ಫಾರ್ಮ್‌ನಲ್ಲಿರುವ ಆಟಗಾರ ಸಂಜು ಸ್ಯಾಮ್ಸನ್, 15 ಎಸೆತಗಳಲ್ಲಿ ಕೇವಲ 11 ರನ್ ಗಳಿಸಿ ಪೆವಿಲಿಯನ್ ಸೇರಿದರು. ಈ ಆಘಾತದ ಬೆನ್ನಲ್ಲೇ ನಾಲ್ಕನೇ ಓವರ್‌ನ ಕೊನೆಯ ಎಸೆತದಲ್ಲಿ ರಬಾಡ ಅವರು ಉರ್ವಿಲ್ ಪಟೇಲ್ ಅವರನ್ನು ಔಟ್ ಮಾಡುವುದರೊಂದಿಗೆ ಸಿಎಸ್‌ಕೆ ಒಂದೇ ಓವರ್‌ನಲ್ಲಿ ಎರಡು ವಿಕೆಟ್ ಕಳೆದುಕೊಂಡಿತು. ಇನ್ನು ಐದನೇ ಓವರ್‌ನಲ್ಲಿ ಮೊಹಮ್ಮದ್ ಸಿರಾಜ್ ಎಸೆತದಲ್ಲಿ ಸರ್ಫರಾಜ್ ಖಾನ್ ಸೊನ್ನೆಗೆ ಔಟಾದಾಗ ಚೆನ್ನೈ ಕೇವಲ 8 ಎಸೆತಗಳ ಅಂತರದಲ್ಲಿ ಮೂರು ವಿಕೆಟ್ ಕಳೆದುಕೊಂಡು ದಿಕ್ಕೆಟ್ಟಿತು.

ವಿಕೆಟ್ ಕುಸಿತವನ್ನು ತಡೆಯಲು ಸಿಎಸ್‌ಕೆ ಮ್ಯಾನೇಜ್‌ಮೆಂಟ್ ಅನಿವಾರ್ಯವಾಗಿ ನಾಲ್ಕನೇ ಓವರ್‌ನಲ್ಲಿಯೇ ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ಬಳಸಿತು. ಶೂನ್ಯಕ್ಕೆ ಔಟಾದ ಸರ್ಫರಾಜ್ ಖಾನ್ ಬದಲಿಗೆ ಉರ್ವಿಲ್ ಪಟೇಲ್ ಅವರನ್ನು ಕಣಕ್ಕಿಳಿಸಲಾಯಿತು. ಆದರೆ, ಈ ಬದಲಾವಣೆ ತಂಡಕ್ಕೆ ಯಾವುದೇ ಲಾಭ ತಂದುಕೊಡಲಿಲ್ಲ. ಕೇವಲ 4 ರನ್ (3 ಎಸೆತ) ಗಳಿಸಿದ ಉರ್ವಿಲ್ ಪಟೇಲ್ ತಕ್ಷಣವೇ ಔಟಾಗಿ ನಿರಾಸೆ ಮೂಡಿಸಿದರು.

ಗಮನಾರ್ಹ ವಿಷಯವೆಂದರೆ, ಈ ಆವೃತ್ತಿಯಲ್ಲಿ ಸಿಎಸ್‌ಕೆ ಇಷ್ಟು ಬೇಗ ಇಂಪ್ಯಾಕ್ಟ್ ಪ್ಲೇಯರ್ ನಿಯಮ ಬಳಸುತ್ತಿರುವುದು ಇದು ಎರಡನೇ ಬಾರಿ. ಈ ಹಿಂದೆ ಗುವಾಹಟಿಯಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಕೂಡ ಆಯುಷ್ ಮ್ಹಾತ್ರೆ ಬದಲಿಗೆ ಸರ್ಫರಾಜ್ ಖಾನ್ ಅವರನ್ನು ಬಳಸಲಾಗಿತ್ತು, ಆ ಪಂದ್ಯದಲ್ಲಿಯೂ ಚೆನ್ನೈ ಸೋಲು ಕಂಡಿತ್ತು. ಇದೀಗ ಗುಜರಾತ್ ವಿರುದ್ಧದ ಪಂದ್ಯದಲ್ಲೂ ಇಂಪ್ಯಾಕ್ಟ್ ಪ್ಲೇಯರ್ ಅಟ್ಟರ್ ಫ್ಲಾಪ್ ಆಗಿರುವುದು ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !