April 26, 2026
Sunday, April 26, 2026
spot_img

ಮುಂಡಗೋಡ ಶೂಟೌಟ್ & ಮರ್ಡರ್ ಕೇಸ್: 24 ಗಂಟೆಯೊಳಗೆ ಐವರು ಸುಪಾರಿ ಕಿಲ್ಲರ್‌ಗಳ ಬಂಧನ

ಹೊಸದಿಗಂತ ಮುಂಡಗೋಡ:

ಪಟ್ಟಣದ ಹೃದಯಭಾಗದಲ್ಲಿ ನಡೆದಿದ್ದ ಜಮೀರ ಅಹ್ಮದ ದರ್ಗಾವಾಲೆ ಎಂಬುವವರ ಭೀಕರ ಹತ್ಯೆ ಪ್ರಕರಣವನ್ನು ಭೇದಿಸುವಲ್ಲಿ ಮುಂಡಗೋಡ ಪೊಲೀಸರು ಕೇವಲ 24 ಗಂಟೆಗಳಲ್ಲಿ ಯಶಸ್ವಿಯಾಗಿದ್ದಾರೆ. ಈ ಸಂಬಂಧ ಪ್ರಮುಖ ಸಂಚುಗಾರ ಸೇರಿದಂತೆ ಐವರು ಆರೋಪಿಗಳನ್ನು ಪೊಲೀಸರು ಜಾಲ ಬೀಸಿ ಹಿಡಿದಿದ್ದಾರೆ.

ಶುಕ್ರವಾರ ರಾತ್ರಿ ಸುಮಾರು 11 ಗಂಟೆಗೆ ಜಮೀರ ಅಹ್ಮದ ತನ್ನ ಸ್ನೇಹಿತನೊಂದಿಗೆ ಬಸ್ ನಿಲ್ದಾಣದ ಎದುರಿಗಿನ ಅಂಬಿಕಾ ಸಾವಜಿ ಹೋಟೆಲ್‌ಗೆ ಊಟಕ್ಕೆ ಬಂದಿದ್ದನು. ಈ ವೇಳೆ ಸ್ನೇಹಿತನನ್ನು ಸಿಗರೇಟ್ ತರಲು ಹೊರಗೆ ಕಳುಹಿಸಿದ್ದ ಸಂದರ್ಭವನ್ನು ಹೊಂಚು ಹಾಕಿದ್ದ ನಾಲ್ವರು ದುಷ್ಕರ್ಮಿಗಳು ಬೈಕ್‌ನಲ್ಲಿ ಆಗಮಿಸಿದ್ದಾರೆ.

ಹೋಟೆಲ್‌ಗೆ ನುಗ್ಗಿದ ಆರೋಪಿಗಳು ಮೊದಲು ಜಮೀರನ ಕಣ್ಣಿಗೆ ಖಾರದ ಪುಡಿ ಎರಚಿದ್ದಾರೆ. ನಂತರ ಗಾಬರಿ ಮೂಡಿಸಲು ಗುಂಡು ಹಾರಿಸಿದ್ದಾರೆ, ಅದೃಷ್ಟವಶಾತ್ ಗುಂಡು ನೆಲಕ್ಕೆ ತಗುಲಿ ಜಮೀರ ಪಾರಾಗಿದ್ದನು. ಜೀವ ಉಳಿಸಿಕೊಳ್ಳಲು ಅಡುಗೆ ಕೋಣೆಗೆ ಓಡಿದ ಜಮೀರನನ್ನು ಬೆನ್ನಟ್ಟಿದ ಹಂತಕರು, ನಾಲ್ಕೈದು ಬಾರಿ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದರು.

ಬಂಧಿತ ಆರೋಪಿಗಳು:
ಮಂಜುನಾಥ ಕಾಜಗಾರ (ಮುಂಡಗೋಡ – ಮುಖ್ಯ ಸಂಚುಗಾರ)

ಶ್ರೀಕಾಂತ ಕಿರಣ್ಣನವರ (ಇಂದಿರಾನಗರಕೊಪ್ಪ)

ಮಂಜುನಾಥ ಬೆಳಗಾಂವ (ಧಾರವಾಡ)

ಅಭಿಷೇಕ ಬಡಶೆಟ್ಟಿ (ಹೆಬ್ಬಳ್ಳಿ)

ದೀಪಕ ನವಲೆ (ಧಾರವಾಡ)

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಕೊಲೆಯಾದ ಜಮೀರ ಮತ್ತು ಮುಖ್ಯ ಆರೋಪಿ ಮಂಜುನಾಥ ಕಾಜಗಾರ ನಡುವೆ ಮೀಟರ್ ಬಡ್ಡಿ ಹಾಗೂ ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಸಂಬಂಧಿಸಿದಂತೆ ಹಳೆಯ ದ್ವೇಷವಿತ್ತು. ಇದೇ ಕಾರಣಕ್ಕೆ ಮಂಜುನಾಥ ಇತರ ನಾಲ್ವರಿಗೆ ಸುಪಾರಿ ನೀಡಿ ಜಮೀರನ ಹತ್ಯೆ ಮಾಡಿಸಿರುವುದು ಬೆಳಕಿಗೆ ಬಂದಿದೆ.

ಹತ್ಯೆ ಮಾಡಿದ ನಂತರ ಆರೋಪಿಗಳು ಹಾನಗಲ್ ಮಾರ್ಗವಾಗಿ ಬೆಂಗಳೂರಿಗೆ ಪರಾರಿಯಾಗಲು ಯತ್ನಿಸಿದ್ದರು. ಎಸ್‌.ಪಿ. ದೀಪನ್ ಹಾಗೂ ಎಂ. ನಾರಾಯಣ ಅವರ ನೇತೃತ್ವದ ತಂಡ ಬೆಂಗಳೂರು ಗ್ರಾಮಾಂತರ ಪೊಲೀಸರೊಂದಿಗೆ ಸಮನ್ವಯ ಸಾಧಿಸಿ, ನೆಲಮಂಗಲದ ಬಳಿ ಆರೋಪಿಗಳನ್ನು ಸಿನಿಮಾ ಮಾದರಿಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !