April 27, 2026
Monday, April 27, 2026
spot_img

ಗುಂಡು ಹಾರಿಸಿಕೊಂಡು ಶಿಕ್ಷಕಿ ಸಾವು, ಸರ್ಕಾರದ ಜನಗಣತಿ ಒತ್ತಡಕ್ಕೆ ಬಲಿ?

ಹೊಸದಿಗಂತ ವರದಿ ಮಡಿಕೇರಿ:

ಶಿಕ್ಷಕಿಯೊಬ್ಬರು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಮಡಿಕೇರಿ ತಾಲೂಕಿನ ಚೇರಂಬಾಣೆ ಗ್ರಾಮದಲ್ಲಿ ನಡೆದಿದೆ.
ಚೇರಂಬಾಣೆ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿ ಅಂಜಪಂಡ ಯು. ರೋಹಿಣಿ (51) ಆತ್ಮಹತ್ಯೆ ಮಾಡಿಕೊಂಡ ಶಿಕ್ಷಕಿ. ಸರಕಾರದ ಜನಗಣತಿ ಕಾರ್ಯದ ಒತ್ತಡ ಇವರ ಸಾವಿಗೆ ಕಾರಣವೇ ಎಂಬ ಶಂಕೆ ವ್ಯಕ್ತವಾಗಿದೆ.

ರೋಹಿಣಿ ಕಳೆದ 25 ವರ್ಷಗಳಿಂದ ತಮ್ಮ ವೃತ್ತಿ ಜೀವನದಲ್ಲಿ ಸಾವಿರಾರು ಮಕ್ಕಳಿಗೆ ದಾರಿದೀಪವಾಗಿದ್ದರು.‌ ಅಲ್ಲದೆ ಎಲ್ಲರ ಅಚ್ಚುಮೆಚ್ಚಿನ ಶಿಕ್ಷಕಿಯಾಗಿದ್ದರೆನ್ನಲಾಗಿದೆ. ಆದರೆ ಭಾನುವಾರ ತಮ್ಮ ಮನೆಯಲ್ಲೇ ಒಂಟಿ‌ ನಳಿಗೆ ಕೋವಿಯಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿದ್ದಾರೆ. ಶನಿವಾರ ರಾತ್ರಿ 12 ಗಂಟೆಯವರೆಗೂ ಕೆಲಸ ಮಾಡಿ ಮಲಗಿದ್ದ ಅವರು ಮುಂಜಾನೆ 5 ಗಂಟೆ ವೇಳೆಗೆ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಗುಂಡಿನ ಸಿಡಿದ ಶಬ್ಧ ಕೇಳುತ್ತಿದ್ದಂತೆ ಪಕ್ಕದ ಕೊಠಡಿಯಲ್ಲಿ ಮಲಗಿದ್ದ ಅವರ ಪತಿ ಕರುಂಬಯ್ಯ ಹಾಗೂ ಮಗಳು ಎದ್ದು ಹೋಗಿ ನೋಡಿದಾಗ ರೋಹಿಣಿ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಕೂಡಲೇ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಭಾಗಮಂಡಲ ಠಾಣೆ ಪೊಲೀಸರು ಮೃತದೇಹವನ್ನು ಕೊಡಗು ಜಿಲ್ಲಾಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ಜನಗಣತಿ ಕೆಸಲ ಒತ್ತಡ ?

ಇನ್ನು ಈ ಬಗ್ಗೆ ಮಾತನಾಡಿರುವ ರೋಹಿಣಿ ಅವರ ಪತಿ ಕರುಂಬಯ್ಯ ಅವರು, ಯಾವಗಲೂ ಟೆನ್ಷನ್ ಎಂದು ಹೇಳುತ್ತಿದ್ದರು. ಜನಗಣತಿ ಆರಂಭವಾದ ಬಳಿಕ ಎಲ್ಲಾ ಕೆಲಸ ಮುಗಿಸಿ ಮಲಗುವುದು ರಾತ್ರಿ 12 ಗಂಟೆಯಾಗುತ್ತಿತ್ತು. ಇವರಿಗೆ 250ಕ್ಕೂ ಹೆಚ್ಚು ಮನೆಗಳ ಜನಗಣತಿ ಮಾಡಲು ಕೊಟ್ಟಿದ್ದರು. ಅದು ಸಾಧ್ಯವಾಗದೇ ಮತ್ತೊಬ್ಬ ಸಹಾಯಕರನ್ನು ಕೊಡುವಂತೆ ತಹಶೀಲ್ದಾರ್​​ಗೆ ಮನವಿ ಮಾಡಿದ್ದರೂ, ಯಾವುದೇ ಸ್ಪಂದನೆ ಸಿಕ್ಕಿರಲಿಲ್ಲ. ಈ ಒತ್ತಡದಿಂದ ಅವರು ಸಾವನ್ನಪ್ಪಿರಬಹುದೆಂದು ಶಂಕಿಸಿದ್ದಾರೆ.

ಆದರೆ ಮಡಿಕೇರಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮೋಹನ್ ಪೆರಾಜೆ ಅವರ ಪ್ರಕಾರ, ಇಲಾಖೆ ಎಂದ ಮೇಲೆ ಒತ್ತಡಗಳು ಇರುತ್ತವೆ. ಆದರೆ ಆತ್ಮಹತ್ಯೆ ಮಾಡಿಕೊಳ್ಳುವಂತಹ ಯಾವುದೇ ಒತ್ತಡಗಳು ಇರಲಿಲ್ಲ. ರೋಹಿಣಿ ಅವರು ತುಂಬಾ ಧೈರ್ಯವಂತೆಯಾಗಿದ್ದವರು. ಎಂತಹದ್ದೇ ಕೆಲಸಗಳನ್ನು ವಹಿಸಿದ್ದರೂ ಕೆಲಸದಿಂದ ಹಿಂದೆ ಸರಿಯುತ್ತಿರಲಿಲ್ಲ. ಹೀಗಾಗಿ ಜನಗಣತಿ ಕಾರ್ಯದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂಬುದನ್ನು ನಂಬಲಾಗುತ್ತಿಲ್ಲ ಎಂದು ಹೇಳಿದ್ದಾರೆ.
ಸಾವಿರಾರು ವಿದ್ಯಾರ್ಥಿಗಳಿಗೆ ದಾರಿದೀಪವಾಗಿದ್ದ ಈ ಶಿಕ್ಷಕಿಯ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !