ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಮತ್ತು ನ್ಯೂಜಿಲೆಂಡ್ ದೇಶಗಳು ಇಂದು ಐತಿಹಾಸಿಕ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ್ದು, ಇದು ದ್ವಿಪಕ್ಷೀಯ ಸಂಬಂಧಗಳಲ್ಲಿ ಒಂದು ಹೆಗ್ಗುರುತು ಕ್ಷಣ ಎಂದು ಪ್ರಧಾನಿ ಮೋದಿ ಬಣ್ಣಿಸಿದ್ದಾರೆ.
ದೆಹಲಿಯಲ್ಲಿ ಇಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಮತ್ತು ನ್ಯೂಜಿಲೆಂಡ್‌ನ ವ್ಯಾಪಾರ ಮತ್ತು ಹೂಡಿಕೆ ಸಚಿವ ಟಾಡ್ ಮೆಕ್‌ಕ್ಲೇ ಅವರು ಈ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದರು. ಈ ಮೂಲಕ ನ್ಯೂಜಿಲೆಂಡ್‌ಗೆ ಭಾರತದಿಂದ ರಫ್ತಾಗುವ 100% ಸರಕುಗಳಿಗೆ ಸುಂಕ ಮುಕ್ತ ಸಿಗಲಿದೆ. ಜೊತೆಗೆ ನ್ಯೂಜಿಲೆಂಡ್‌ನಿಂದ ಬರುವ 95% ರಷ್ಟು ಸರಕುಗಳಿಗೆ ಭಾರತವು ಹಂತ ಹಂತವಾಗಿ ಸುಂಕವನ್ನು ಕಡಿಮೆ ಮಾಡಲಿದೆ.
ಈ ಕುರಿತು ಖುಷಿಹಂಚಿಕೊಂಡ ಮೋದಿ, ಭಾರತ-ನ್ಯೂಜಿಲೆಂಡ್ ಪಾಲುದಾರಿಕೆಯಲ್ಲಿ ಹೆಗ್ಗುರುತು ಕ್ಷಣವಾಗಿದೆ. ಇದರಿಂದ ಅಭಿವೃದ್ಧಿ ಸಹಭಾಗಿತ್ವಕ್ಕೆ ಮತ್ತಷ್ಟು ವೇಗ ಸಿಗಲಿದೆ ಎಂಬುವುದು ನನಗೆ ಸಂತೋಷವಾಗಿದೆ. ಎರಡು ರಾಷ್ಟ್ರಗಳ ಆಳವಾದ ವಿಶ್ವಾಸ, ಹಂಚಿಕೆಯ ಮೌಲ್ಯಗಳು ಮತ್ತು ಮಹತ್ವಾಕಾಂಕ್ಷೆಯನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ತಿಳಿಸಿದ್ದಾರೆ.
ಈ ಒಪ್ಪಂದದಿಂದಾಗಿ ರೈತರು, ಯುವಕರು, ಮಹಿಳೆಯರು, ಎಂಎಸ್‌ಎಂಇಗಳು, ಕುಶಲಕರ್ಮಿಗಳು, ನವೋದ್ಯಮಗಳು, ವಿದ್ಯಾರ್ಥಿಗಳು ಮತ್ತು ನಾವೀನ್ಯಕಾರರಿಗೆ ಹೆಚ್ಚಿನ ಪ್ರಮಾಣದಲ್ಲಿ ಪ್ರಯೋಜನ ಸಿಗಲಿದೆ ಎಂದು ಪ್ರಧಾನಿ ತಿಳಿಸಿದರು.
ಇದರಿಂದಾಗಿ ಹೊಸ ಹೊಸ ಯೋಜನೆಗಳಿಗೆ ಮುಕ್ತ ಮಾರ್ಗ ತೆರೆಯಲಿದೆ. ಮತ್ತಷ್ಟು ಅವಕಾಶಗಳು ಸೃಷ್ಟಿಯಾಗಲಿದೆ. ನಮ್ಮ ನಡುವಿನ ಸಂಬಂಧಗಳು ಮತ್ತಷ್ಟು ಬಲಗೊಳ್ಳಲಿದೆ.
ಜೊತೆಗೆ ನ್ಯೂಜಿಲೆಂಡ್‌ನ 20 ಶತಕೋಟಿ ಡಾಲರ್ ಹೂಡಿಕೆ ಬದ್ಧತೆಯು ಕೃಷಿ, ಉತ್ಪಾದನೆ, ನಾವೀನ್ಯತೆ ಮತ್ತು ತಂತ್ರಜ್ಞಾನದಲ್ಲಿ ನಮ್ಮ ಸಹಕಾರವನ್ನು ಮತ್ತಷ್ಟು ಬಲಪಡಿಸುತ್ತದೆ, ಎರಡೂ ದೇಶಗಳಿಗೆ ಹೆಚ್ಚು ಸಮೃದ್ಧ ಮತ್ತು ಕ್ರಿಯಾತ್ಮಕ ಭವಿಷ್ಯಕ್ಕೆ ದಾರಿ ಮಾಡಿಕೊಡಲಿದೆ ಎಂದು ತಿಳಿಸಿದರು.
ಇತ್ತ ನ್ಯೂಜಿಲೆಂಡ್ ಪ್ರಧಾನಿ ಕ್ರಿಸ್ಟೋಫರ್ ಲಕ್ಸನ್ ಕೂಡ ಈ ಒಪ್ಪಂದವನ್ನು ಎರಡುದೇಶಗಳ ನಡುವಿನ ಮಹತ್ವದ ಮೈಲಿಗಲ್ಲು ಎಂದು ಬಣ್ಣಿಸಿದ್ದಾರೆ. ಇಂದು ನಾವು ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಸಂಬಂಧದಲ್ಲಿ ಒಂದು ಐತಿಹಾಸಿಕ ಮೈಲಿಗಲ್ಲನ್ನು ಸ್ಥಾಪಿಸಿದ್ದೇವೆ. ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ್ದೇವೆʼ ಎಂದು ತಿಳಿಸಿದರು. ಬರೆದುಕೊಂಡಿದ್ದಾರೆ.



