ಹೊಸ ದಿಗಂತ ಡಿಜಿಟಲ್ ಡೆಸ್ಕ್:
2016 ರಲ್ಲಿ ಸಣ್ಣ ಆವರಣದಲ್ಲಿ ಹಿಂಜರಿಕೆಯೊಂದಿಗೆ ಆರಂಭವಾದ ಭಾರತೀಯ ರತ್ನ ಮತ್ತು ಆಭರಣ ಸಂಸ್ಥೆಯು ಹತ್ತು ವರ್ಷಗಳಲ್ಲಿ ಬೆಳೆದಿದ್ದು ಹಲವಾರು ಗ್ರಾಮೀಣ ಪ್ರತಿಭೆಗಳಿಗೆ ಉದ್ಯೋಗಾವಕಾಶಗಳನ್ನು ನೀಡಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ಭಾರತೀಯ ರತ್ನಗಳ ಹಾಗೂ ಆಭರಣ ಸಂಸ್ಥೆಯ ನೂತನ ಕಚೇರಿಯ ಅನಾವರಣಗೊಳಿಸಿ, ಅಂಬಲಪಾಡಿ ಶ್ಯಾಮಿಲಿ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಉದ್ಯಮ ನೇತೃತ್ವದ ಕೌಶಲ್ಯವು ಯುವಕರ ಜೀವನವನ್ನು ಹೇಗೆ ಪರಿವರ್ತಿಸುತ್ತದೆ ಮತ್ತು ಅವಕಾಶಗಳನ್ನು ಸೃಷ್ಟಿಸುತ್ತದೆ ಎಂಬುದಕ್ಕೆ ಉಡುಪಿ ಐಐಜಿಜೆ ಒಂದು ಉತ್ತಮ ಉದಾಹರಣೆಯಾಗಿದೆ. ಈ ಸಂಸ್ಥೆಯು ವಿದ್ಯಾರ್ಥಿಗಳಿಗೆ ಉದ್ಯೋಗಾರ್ಹ ಕೌಶಲ್ಯಗಳು, ಉದ್ಯಮಶೀಲತಾ ಅವಕಾಶಗಳು ಮತ್ತು ಸಮೃದ್ಧಿಯ ಹಾದಿಗಳೊಂದಿಗೆ ಸಬಲೀಕರಣಗೊಳಿಸುತ್ತಿದೆ ಎಂದರು.
ಕಳೆದ ಸಾಲಿನಲ್ಲಿ ೬೦೦ ವಿದ್ಯಾರ್ಥಿಗಳು ಸಂಸ್ಥೆಯಲ್ಲಿ ತರಬೇತಿ ಪಡೆದಿದ್ದಾರೆ. ಕರಾವಳಿಯ ರತ್ನಗಿರಿಯಿಂದ ಕೇರಳದವರೆಗೆ ರತ್ನ ಮತ್ತು ಆಭರಣ ತಯಾರಿಕೆಯಲ್ಲಿ ಆಸಕ್ತಿ ಇರುವ ಪ್ರತಿಭೆಗಳಿಗೆ ಅದರಲ್ಲೂ ಗ್ರಾಮೀಣ ಭಾಗದವರಿಗೆ ಸಂಸ್ಥೆಯಿಂದ ಅನುಕೂಲವಾಗುತ್ತಿದೆ ಎಂದ ಅವರು, ಉಡುಪಿ ಐಐಜಿಜೆ ಕೇಂದ್ರ, ಉಡುಪಿ-ಮಂಗಳೂರು ಮಾತ್ರವಲ್ಲದೆ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ವಿದ್ಯಾರ್ಥಿಗಳು ಸಂಸ್ಥೆಯಲ್ಲಿ ತರಬೇತಿ ಹೊಂದಿ, ತಮ್ಮದೇ ಆದ ಆಭರಣ ತಯಾರಿಕಾ ಅಂಗಡಿಗಳನ್ನು ತೆರೆದು ಸ್ವ-ಉದ್ಯೋಗ ಕಂಡುಕೊಂಡಿದ್ದಾರೆ. ಸಂಸ್ಥೆಯಲ್ಲಿ ವೃತ್ತಿಪರ ತರಬೇತುದಾರರಿಂದ ತರಬೇತಿ ನೀಡಲಾಗುತ್ತಿದ್ದು, ವಿಶೇಷವಾಗಿ ಮಹಿಳೆಯರು ಈ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬೇಕು. ಭಾರತೀಯ ಸಾಂಪ್ರದಾಯಿಕ ಆಭರಣಗಳು ಮಧ್ಯಪ್ರಾಚ್ಯ ಮತ್ತು ಅಮೆರಿಕಾ ದೇಶಗಳಲ್ಲಿ ಹೆಚ್ಚಿನ ಬೇಡಿಕೆ ಹೊಂದಿದೆ. ಜಿಲ್ಲೆಯ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಬೇಕು ಎಂದರು.
ಸಂಸ್ಥೆಯಲ್ಲಿ ತರಬೇತಿ ಪಡೆದು ನಿರ್ಗಮಿಸಿದ ಅತ್ಯುತ್ತಮ ವಿದ್ಯಾರ್ಥಿಗಳಿಗೆ ವಿಶ್ವಕರ್ಮ ಯೋಜನೆಯ ಪ್ರಮಾಣ ಪತ್ರ ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ ಪ್ರಯೋಗಶಾಲೆಯಲ್ಲಿ ತಯಾರಾಗುವ ವಜ್ರೋದ್ಯಮವನ್ನು ಉತ್ತೇಜಿಸಲು ವಿಶೇಷ ಪಠ್ಯಕ್ರಮವನ್ನು ಅಳವಡಿಸಲು ಐಐಟಿ ಮದ್ರಾಸ್ ಮತ್ತು ಐಐಜಿಜೆ ನಡುವೆ ಒಡಂಬಡಿಕೆ ಮಾಡಿಕೊಳ್ಳಲಾಯಿತು.
ವೇದಿಕೆಯಲ್ಲಿ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ , ಶಾಸಕ ಯಶ್‌ಪಾಲ್ ಸುವರ್ಣ , ಗುರ್ಮೆ ಸುರೇಶ್ ಶೆಟ್ಟಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಜಿಜೆಇಪಿಸಿ ಅಧ್ಯಕ್ಷ ಕಿರೀಟ್ ಬನ್ಸಾಲಿ ಸ್ವಾಗತಿಸಿ, ಉಪಾಧ್ಯಕ್ಷ ಶೌನಕ್ ಪಾರಿಖ್ ವಂದಿಸಿದರು.



