April 30, 2026
Thursday, April 30, 2026
spot_img

ಅಶ್ಲೀಲ ವಿಡಿಯೋಗಳಿಗೆ ಕತ್ತರಿ ಬೀಳುತ್ತಾ? ಡೀಪ್‌ಫೇಕ್ ತಡೆಗೆ ಬಾಲಿವುಡ್ ನಟನ ಕಾನೂನು ಹೋರಾಟ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇತ್ತೀಚಿನ ದಿನಗಳಲ್ಲಿ ಸೆಲೆಬ್ರಿಟಿಗಳ ಹೆಸರು, ಧ್ವನಿ ಮತ್ತು ಫೋಟೋಗಳನ್ನು ಅವರ ಅನುಮತಿಯಿಲ್ಲದೆ ಬಳಸುವುದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಅದರಲ್ಲೂ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಮೂಲಕ ಸೃಷ್ಟಿಸುವ ‘ಡೀಪ್‌ಫೇಕ್’ ವಿಡಿಯೋಗಳು ನಟ-ನಟಿಯರಿಗೆ ತಲೆನೋವಾಗಿವೆ. ಇದೀಗ ಬಾಲಿವುಡ್ ನಟ ಅರ್ಜುನ್ ಕಪೂರ್ ತಮ್ಮ ವ್ಯಕ್ತಿತ್ವ ಹಕ್ಕುಗಳ ರಕ್ಷಣೆ ಕೋರಿ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದಾರೆ.

ಕೃತಕ ಬುದ್ಧಿಮತ್ತೆ ಬಳಸಿ ತಯಾರಿಸಿದ ಅಶ್ಲೀಲ ವಿಡಿಯೋಗಳು ಮತ್ತು ತಮ್ಮ ಫೋಟೋಗಳನ್ನು ಪ್ರಾಣಿಗಳ ಚಿತ್ರಗಳೊಂದಿಗೆ ಮಾರ್ಫಿಂಗ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡಲಾಗುತ್ತಿದೆ. ಇದು ವ್ಯಕ್ತಿಯ ಗೌರವಕ್ಕೆ ಧಕ್ಕೆ ತರುವ ವಿಷಯವಾಗಿದ್ದು, ಇಂತಹ ಕೃತ್ಯಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಮತ್ತು ತಮ್ಮ ಫೋಟೋ, ಧ್ವನಿಯ ದುರ್ಬಳಕೆಯನ್ನು ತಡೆಯಬೇಕು ಎಂದು ಅರ್ಜುನ್ ಕಪೂರ್ ಪರ ವಕೀಲ ಪ್ರವೀಣ್ ಆನಂದ್ ವಾದಿಸಿದರು.

ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ಅವರು ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ವ್ಯಕ್ತಿತ್ವ ಹಕ್ಕುಗಳ ನಡುವಿನ ವ್ಯತ್ಯಾಸದ ಬಗ್ಗೆ ಕೆಲವು ಮಹತ್ವದ ಅಂಶಗಳನ್ನು ಹಂಚಿಕೊಂಡಿದ್ದಾರೆ:

ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿಯ ಬಗ್ಗೆ ನಡೆಯುವ ಪ್ರತಿಯೊಂದು ಚರ್ಚೆಯನ್ನು ನಿಯಂತ್ರಿಸಲು ಸಾಧ್ಯವಿಲ್ಲ.

ಎಲ್ಲವನ್ನೂ ತಡೆಯುತ್ತಾ ಹೋದರೆ ಸಂವಿಧಾನ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಬಹುದು.

ಯಾವುದಾದರೂ ಅಂಶವು ವ್ಯಕ್ತಿಯ ಗೌರವಕ್ಕೆ ನೇರವಾಗಿ ಧಕ್ಕೆ ತರುವಂತಿದ್ದರೆ ಅಥವಾ ಮಾನಹಾನಿಕರವಾಗಿದ್ದರೆ ಮಾತ್ರ ಅಂತಹವುಗಳನ್ನು ತೆಗೆದುಹಾಕಲು ಆದೇಶಿಸಬಹುದು.

ಹಿಂದೆ ಸುನಿಲ್ ಗವಾಸ್ಕರ್, ಕರಣ್ ಜೋಹರ್ ಮತ್ತು ಅಲ್ಲು ಅರ್ಜುನ್ ಅಂತಹ ಸೆಲೆಬ್ರಿಟಿಗಳಿಗೆ ಇಂತಹ ರಕ್ಷಣೆ ನೀಡಲಾಗಿತ್ತು. ಆದರೆ ಅರ್ಜುನ್ ಕಪೂರ್ ಪ್ರಕರಣದಲ್ಲಿ ನ್ಯಾಯಾಲಯವು ಸಾಮಾನ್ಯ ಜನರ ಹಕ್ಕುಗಳು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಹೆಚ್ಚು ಒತ್ತು ನೀಡಿದೆ. ಈ ಕುರಿತು ನ್ಯಾಯಾಲಯವು ಶೀಘ್ರದಲ್ಲೇ ವಿವರವಾದ ಮಧ್ಯಂತರ ಆದೇಶವನ್ನು ನೀಡಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !