ಹೊಸದಿಗಂತ ಡಿಜಿಟಲ್ ಡೆಸ್ಕ್:
CEC ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಹಾಗೂ SIR ಅಕ್ರಮ ಖಂಡಿಸಿ CJP ಅ.10 ರಂದು ಹಮ್ಮಿಕೊಂಡಿರುವ ಬೃಹತ್ ಪ್ರತಿಭಟನೆಯನ್ನು ಹತ್ತಿಕ್ಕಲು ದೆಹಲಿ ಪೊಲೀಸರು ಭಾರೀ ಪ್ಲ್ಯಾನ್ ಮಾಡಿದ್ದಾರೆ. ಈ ಧರಣಿಗೆ ಅಧಿಕೃತ ಇಲಾಖೆಯು ಅನುಮತಿ ನಿರಾಕರಿಸಿದ್ದರೂ, ಪ್ರತಿಭಟನಾಕಾರರು ಮುನ್ನುಗ್ಗುವ ಭೀತಿಯ ಹಿನ್ನೆಲೆಯಲ್ಲಿ ಇಡೀ ರಾಜಧಾನಿಯನ್ನು ಖಾಕಿ ಕೋಟೆಯನ್ನಾಗಿ ಮಾರ್ಪಡಿಸಲಾಗಿದೆ.
1.5 ಕಿ.ಮೀ. ವ್ಯಾಪ್ತಿ ತೀವ್ರ ಸೂಕ್ಷ್ಮ ವಲಯ
ದೆಹಲಿ ಪೊಲೀಸರು ಜಂತರ್ ಮಂತರ್, ಜನಪಥ್, ಭಾರತೀಯ ಚುನಾವಣಾ ಆಯೋಗದ ಪ್ರಧಾನ ಕಚೇರಿ ಹಾಗೂ ದೆಹಲಿ ಪೊಲೀಸ್ ಪ್ರಧಾನ ಕಚೇರಿಯನ್ನು ಒಳಗೊಂಡಿರುವ ಅಂದಾಜು 1.5 ಕಿ.ಮೀ. ವ್ಯಾಪ್ತಿಯನ್ನು ಅತ್ಯಂತ ಸೂಕ್ಷ್ಮ ಪ್ರದೇಶ ಎಂದು ಗುರುತಿಸಿದ್ದಾರೆ. ಈ ಹೈ-ಪ್ರೊಫೈಲ್ ಆಡಳಿತಾತ್ಮಕ ವಲಯದ ರಕ್ಷಣೆಗಾಗಿ 6,500 ಕ್ಕೂ ಹೆಚ್ಚು ಸಶಸ್ತ್ರ ಭದ್ರತಾ ಸಿಬ್ಬಂದಿಗಳನ್ನು ಕಾವಲಿಗೆ ನಿಯೋಜಿಸಲಾಗಿದೆ.
20,000 ಖಾಕಿ ಪಡೆ
ಪ್ರತಿಭಟನಾಕಾರರನ್ನು ಗಡಿಗಳಲ್ಲೇ ತಡೆಯಲು ಹಾಗೂ ದೆಹಲಿ, ಸೆಂಟ್ರಲ್ ದೆಹಲಿ ಜಿಲ್ಲೆಗಳಾದ್ಯಂತ 20,000 ಕ್ಕೂ ಹೆಚ್ಚು ದೆಹಲಿ ಪೊಲೀಸ್ ಮತ್ತು ಅರೆಸೇನಾ ಪಡೆಸಿಬ್ಬಂದಿಗಳನ್ನು ಕಾವಲಿಗಿರಿಸಲಾಗಿದೆ.
300 ಕ್ಯಾಮೆರಾಗಳ ಹದ್ದಿನ ಕಣ್ಣು
ದೆಹಲಿಯ ಪ್ರಮುಖ ಆಯಕಟ್ಟಿನ ಜಾಗಗಳಲ್ಲಿ ಧ್ವನಿ ಮತ್ತು ದೃಶ್ಯ ಎರಡನ್ನೂ ರೆಕಾರ್ಡ್ ಮಾಡುವ ಸಾಮರ್ಥ್ಯವಿರುವ 300 ಕ್ಕೂ ಹೆಚ್ಚು ಅತ್ಯಾಧುನಿಕ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇದಲ್ಲದೆ, 100 ಕ್ಕೂ ಹೆಚ್ಚು ರೆಕಾರ್ಡಿಂಗ್ ಸಿಬ್ಬಂದಿ, ಡ್ರೋನ್‌ಗಳು ಮತ್ತು ಫೇಶಿಯಲ್ ರೆಕಗ್ನಿಷನ್ ಸಿಸ್ಟಮ್ (FRS) ತಂತ್ರಜ್ಞಾನದ ಮೂಲಕ ಪ್ರತಿಭಟನಾಕಾರರ ಮೇಲೆ ತೀವ್ರ ನಿಗಾ ಇಡಲಾಗುತ್ತಿದೆ.
12 ತಾತ್ಕಾಲಿಕ ಬಂಧನ ಕೇಂದ್ರಗಳು ಸಿದ್ಧ
ನಿಷೇಧಾಜ್ಞೆ ಮೀರಿ ಬರುವ ಪ್ರತಿಭಟನಾಕಾರರನ್ನು ತಕ್ಷಣವೇ ಬಂಧಿಸಿ ಇಡಲು ಛತ್ರಸಾಲ್ ಸ್ಟೇಡಿಯಂ, ರಾಜೀವ್ ಗಾಂಧಿ ಸ್ಟೇಡಿಯಂ ಮತ್ತು ಯಮುನಾ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಸೇರಿದಂತೆ 12 ಬೃಹತ್ ತಾತ್ಕಾಲಿಕ ಜೈಲುಗಳನ್ನುಸಿದ್ಧಪಡಿಸಿಕೊಳ್ಳಲಾಗಿದೆ. ಹಾಗೆಯೇ ಜಂತರ್ ಮಂತರ್ ರಸ್ತೆಯತ್ತ ಯಾರೂ ನುಗ್ಗದಂತೆ ತಡೆಯಲು ಕಬ್ಬಿಣ ಮತ್ತು ಕಾಂಕ್ರೀಟ್‌ನ ಬರೋಬ್ಬರಿ 7 ಪದರಗಳ ಭದ್ರತಾ ಬ್ಯಾರಿಕೇಡ್‌ಗಳನ್ನು ರಸ್ತೆಗೆ ಅಡ್ಡಲಾಗಿ ನಿರ್ಮಿಸಲಾಗಿದೆ. ಈ ಹಿಂದಿನ ಪ್ರತಿಭಟನೆಗಳಿಗಿಂತ ಭಿನ್ನವಾಗಿ, ಈ ಬಾರಿ ಕಾನೂನು ಉಲ್ಲಂಘಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮತ್ತು ಲಾಠಿ ಬಳಸಲು ಪೊಲೀಸರಿಗೆ ಮುಕ್ತ ಅಧಿಕಾರ ನೀಡಲಾಗಿದೆ.
ಇಂಟರ್ನೆಟ್ ಮತ್ತು ಮದ್ಯ ಮಾರಾಟ ನಿಷೇಧ
ಮುನ್ನೆಚ್ಚರಿಕೆ ಕ್ರಮವಾಗಿ ಇಂದು ರಾತ್ರಿ 10 ಗಂಟೆಯಿಂದ ಜನಪಥ್-ಕರ್ತವ್ಯ ಪಥ್ ಸುತ್ತಮುತ್ತ 24 ಗಂಟೆಗಳ ಕಾಲ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಅಲ್ಲದೆ, ಇಂದು ಮತ್ತು ನಾಳೆ ದೆಹಲಿಯಾದ್ಯಂತ ಮದ್ಯದ ಅಂಗಡಿಗಳನ್ನು ಮುಚ್ಚಲು ಆದೇಶಿಸಲಾಗಿದೆ.
ಸಂಯಮ ಕಾಯ್ದುಕೊಳ್ಳಲು ಹಿರಿಯ ಅಧಿಕಾರಿಗಳ ಸೂಚನೆ
ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ತಡೆಯಲು ಮತ್ತು ಪೊಲೀಸರನ್ನು ನೆಗೆಟಿವ್ ಆಗಿ ಬಿಂಬಿಸುವ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡುವುದನ್ನು ತಡೆಯಲು, ಪ್ರತಿಭಟನಾಕಾರರೊಂದಿಗೆ ಯಾವುದೇ ರೀತಿಯ ಅನಗತ್ಯ ಮಾತಿನ ಚಕಮಕಿಗೆ ಇಳಿಯಬಾರದು ಎಂದು ಹಿರಿಯ ಅಧಿಕಾರಿಗಳು ಸಿಬ್ಬಂದಿಗಳಿಗೆ ಸೂಚನೆ ನೀಡಿದ್ದಾರೆ.



