ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂಡಿಯನ್ ಪ್ರೀಮಿಯರ್ ಲೀಗ್‌ನ ಅತಿದೊಡ್ಡ ಪೈಪೋಟಿ ಎನಿಸಿಕೊಂಡಿರುವ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಇಂದು ಮುಖಾಮುಖಿಯಾಗುತ್ತಿವೆ. ಆದರೆ, ಈ ಬಾರಿಯ ‘ಎಲ್ ಕ್ಲಾಸಿಕೋ’ ಮುಂಬೈ ಪಾಲಿಗೆ ಅತ್ಯಂತ ನಿರ್ಣಾಯಕವಾಗಿದೆ. ಸತತ ಸೋಲುಗಳಿಂದ ಕಂಗೆಟ್ಟಿರುವ ಹಾರ್ದಿಕ್ ಪಾಂಡ್ಯ ಪಡೆಗೆ ಪ್ಲೇಆಫ್ ರೇಸ್‌ನಲ್ಲಿ ಉಳಿಯಲು ಈ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿದೆ.
ಪ್ರಸ್ತುತ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿರುವ ಮುಂಬೈ, ಆಡಿದ 8 ಪಂದ್ಯಗಳಲ್ಲಿ ಗೆದ್ದಿರುವುದು ಕೇವಲ 2 ಮಾತ್ರ. ಪ್ಲೇಆಫ್‌ಗೆ ನೇರವಾಗಿ ಅರ್ಹತೆ ಪಡೆಯಲು ಬೇಕಿರುವ 16 ಅಂಕಗಳನ್ನು ಗಳಿಸಬೇಕಾದರೆ, ಮುಂಬೈ ಇನ್ನುಳಿದ ಎಲ್ಲಾ 6 ಪಂದ್ಯಗಳನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದೆ.
ಮುಂಬೈ ತಂಡದ ನೆಟ್ ರನ್ ರೇಟ್ ಸದ್ಯ -0.784 ರಷ್ಟಿದ್ದು, ಇದು ಪ್ಲೇಆಫ್ ಹಾದಿಗೆ ದೊಡ್ಡ ಅಡ್ಡಿಯಾಗಿದೆ. ಕೇವಲ ಗೆಲುವು ಮಾತ್ರವಲ್ಲದೆ, ದೊಡ್ಡ ಅಂತರದ ಜಯ ಸಾಧಿಸಿದರೆ ಮಾತ್ರ ಟೈ-ಬ್ರೇಕರ್ ಹಂತದಲ್ಲಿ ತಂಡಕ್ಕೆ ಅನುಕೂಲವಾಗಲಿದೆ.
ಇದೇ ಸೀಸನ್‌ನ ಮೊದಲ ಮುಖಾಮುಖಿಯಲ್ಲಿ ಸಿಎಸ್‌ಕೆ ವಿರುದ್ಧ 103 ರನ್‌ಗಳ ಭೀಕರ ಸೋಲು ಕಂಡಿದ್ದ ಮುಂಬೈಗೆ, ಇಂದು ಆ ಕಹಿ ನೆನಪನ್ನು ಅಳಿಸಿ ಹಾಕುವ ಅವಕಾಶವಿದೆ.
ಸಿಎಸ್‌ಕೆ ವಿರುದ್ಧ ಮುಂಬೈ ಸೋತರೆ, ಅವರ ಪ್ಲೇಆಫ್ ಹಾದಿ ಬಹುತೇಕ ಮುಚ್ಚಿದಂತೆಯೇ ಸರಿ. ಸೋಲಿನ ನಂತರ ಉಳಿದ 5 ಪಂದ್ಯಗಳನ್ನು ಗೆದ್ದರೂ ಮುಂಬೈ ಗರಿಷ್ಠ 14 ಅಂಕಗಳನ್ನಷ್ಟೇ ಪಡೆಯಲು ಸಾಧ್ಯ. ಸದ್ಯ ಪಂಜಾಬ್ ಕಿಂಗ್ಸ್ (13 ಅಂಕ), ಆರ್‌ಸಿಬಿ, ಆರ್‌ಆರ್ ಮತ್ತು ಎಸ್‌ಆರ್‌ಹೆಚ್ (ತಲಾ 12 ಅಂಕ) ತಂಡಗಳು ಬಲಿಷ್ಠ ಸ್ಥಿತಿಯಲ್ಲಿರುವುದರಿಂದ, ಮುಂಬೈ ಕೇವಲ 14 ಅಂಕಗಳೊಂದಿಗೆ ಮುಂದಿನ ಹಂತಕ್ಕೆ ಏರುವುದು ಅಸಾಧ್ಯದ ಮಾತು.
ಹೀಗಾಗಿ, ಇಂದಿನ ಪಂದ್ಯವು ಮುಂಬೈ ಇಂಡಿಯನ್ಸ್ ಪಾಲಿಗೆ ಅಕ್ಷರಶಃ ‘ಫೈನಲ್’ ಪಂದ್ಯದಂತಿದೆ.



