November 5, 2026
Thursday, November 5, 2026
spot_img

ಬೆಲೆ ಏರಿಕೆಯ ಶಾಕ್: ಹಾಲಿನ ಬೆನ್ನಲ್ಲೇ ತುಪ್ಪ, ಪನ್ನೀರ್ ರೇಟ್ ದುಬಾರಿ; ಬಿಎಂಟಿಸಿ ಪ್ರಯಾಣಿಕರೂ ಕಂಗಾಲು‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ರಾಜ್ಯದಲ್ಲಿ ಹಾಲಿನ ದರ ಹೆಚ್ಚಳವಾದ ಬೆನ್ನಲ್ಲೇ ಸಾರ್ವಜನಿಕರಿಗೆ ಮತ್ತೊಂದು ಬೆಲೆ ಏರಿಕೆಯ ಬಿಸಿ ತಟ್ಟಿದೆ. ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳ (KMF) ತನ್ನ ಪ್ರಮುಖ ಡೈರಿ ಉತ್ಪನ್ನಗಳ ಬೆಲೆಯನ್ನು ಗಣನೀಯವಾಗಿ ಹೆಚ್ಚಿಸಿದೆ. ಇದರೊಂದಿಗೆ ರಾಜಧಾನಿಯ ಸಾರಿಗೆ ಸಂಸ್ಥೆಯಾದ ಬಿಎಂಟಿಸಿ ಕೂಡ ತನ್ನ ಪ್ರಯಾಣಿಕರ ಪಾಸ್ ದರಗಳನ್ನು ಪರಿಷ್ಕರಿಸುವ ಮೂಲಕ ಜನಸಾಮಾನ್ಯರ ಮೇಲೆ ಮತ್ತಷ್ಟು ಆರ್ಥಿಕ ಹೊರೆಯನ್ನು ಹೊರಿಸಿದೆ.

ತುಪ್ಪ, ಬೆಣ್ಣೆ, ಪನ್ನೀರ್ ದರದಲ್ಲಿ ದಾಖಲೆ ಏರಿಕೆ

ಕೆಎಂಎಫ್ ಪ್ರಕಟಣೆಯ ಪ್ರಕಾರ, ನಂದಿನಿ ಉತ್ಪನ್ನಗಳ ಹೊಸ ದರಗಳು ನವೆಂಬರ್ 4 ರಿಂದಲೇ ಜಾರಿಗೆ ಬಂದಿವೆ. ಪ್ರತಿ ಲೀಟರ್‌ಗೆ ಬರೋಬ್ಬರಿ 100 ರೂಪಾಯಿ ಹೆಚ್ಚಳವಾಗಿದ್ದು, 750 ರೂ.ಇದ್ದ ದರ ಈಗ 850 ರೂ.ಗೆ ತಲುಪಿದೆ. 15 ಕೆಜಿಯ ಟಿನ್ ಬೆಲೆ 11,625 ರೂ.ರಿಂದ 14,100 ರೂ.ಗೆ ಏರಿಕೆಯಾಗಿದೆ.

ಹಾಗೆಯೇ ನಂದಿನಿ ಬೆಣ್ಣೆ ಪ್ರತಿ ಕೆಜಿಗೆ 80 ರೂಪಾಯಿ ಏರಿಕೆಯಾಗಿದ್ದು, 700 ರೂ. ಇದ್ದ ದರ 780 ರೂ.ಗೆ ತಲುಪಿದೆ. 500 ಗ್ರಾಂ ಉಪ್ಪಿಲ್ಲದ ಬೆಣ್ಣೆಯ ದರ 390 ರೂ.ಆಗಿದೆ. ಇನ್ನು, ಪನ್ನೀರ್ ಪ್ರತಿ ಕೆಜಿಗೆ 77 ರೂಪಾಯಿ ಹೆಚ್ಚಳವಾಗಿದ್ದು, 408 ರೂ. ಯಿಂದ 485 ರೂ.ಗೆ ಜಿಗಿದಿದೆ.

ಬಿಎಂಟಿಸಿ ಪಾಸ್ ದರ ದುಬಾರಿ

ನಂದಿನಿ ಉತ್ಪನ್ನಗಳ ಬೆಲೆ ಏರಿಕೆಯ ಬೆನ್ನಲ್ಲೇ ಬಿಎಂಟಿಸಿ ಬಸ್ ಪಾಸ್ ದರಗಳನ್ನೂ ಹೆಚ್ಚಿಸಲಾಗಿದೆ. ಸಾರಿಗೆ ಸಂಸ್ಥೆಗಳ ನಷ್ಟ ಸರಿದೂಗಿಸಲು ಈ ಕ್ರಮ ಕೈಗೊಳ್ಳಲಾಗಿದ್ದು, ಹೊಸ ದರಗಳು ತಕ್ಷಣದಿಂದಲೇ ಅನ್ವಯವಾಗಲಿವೆ.

ಸಾಮಾನ್ಯ ಬಸ್‌ಗಳ ದಿನದ ಪಾಸ್ ದರ 80ರೂ. ಯಿಂದ 100ರೂ.ಗೆ ಏರಿಕೆಯಾಗಿದ್ದರೆ, ವೋಲ್ವೋ   ದಿನದ ಪಾಸ್ 140 ರೂ.ಯಿಂದ 175ರೂ.ಗೆ ಹೆಚ್ಚಳವಾಗಿದೆ. ಸಾಮಾನ್ಯ ಮಾಸಿಕ ಪಾಸ್ ದರದಲ್ಲಿ ಬರೋಬ್ಬರಿ 300 ರೂಪಾಯಿ ಹೆಚ್ಚಿಸಲಾಗಿದ್ದು, ಇನ್ಮುಂದೆ ಪ್ರಯಾಣಿಕರು 1,200 ರ ಬದಲಿಗೆ 1,500 ರೂ. ನೀಡಬೇಕಾಗುತ್ತದೆ. ವೋಲ್ವೋ ತಿಂಗಳ ಪಾಸ್ ದರ 2,380 ರಿಂದ 2,500 ರೂ.ಗೆ ಏರಿದೆ.

ಇದನ್ನೂ ಓದಿ:

ರಾಜ್ಯದ ಹಲವು ಭಾಗಗಳಲ್ಲಿ ಈಗಾಗಲೇ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಜನರಿಗೆ, ಬ್ಯಾಕ್-ಟು-ಬ್ಯಾಕ್ ಜಾರಿಯಾಗಿರುವ ಈ ಬೆಲೆ ಏರಿಕೆಗಳು ಗಾಯದ ಮೇಲೆ ಬರೆ ಎಳೆದಂತಾಗಿವೆ.

Must Read

Skip to toolbar