ಹೊಸದಿಗಂತ ವರದಿ, ಚಿತ್ರದುರ್ಗ:
ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಹೆಮ್ಮರವಾಗಿ ಬೆಳೆದು ಅಧಿಕಾರ ಹಿಡಿಯುವಲ್ಲಿ ಬಿ.ಎಸ್.ಯಡಿಯೂರಪ್ಪನವರ ಪಾತ್ರ ಬಹಳ ದೊಡ್ಡದು ಎಂದು ಕೇಂದ್ರ ಸರ್ಕಾರದ ಗ್ರಾಹಕ ವ್ಯವಹಾರಗಳ ಆಹಾರ ಮತ್ತು ಸಾರ್ವಜನಿಕ ವಿತರಣೆ ಹಾಗೂ ಹೊಸ ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ್ ಜೋಷಿ ಹೇಳಿದರು.
ನಗರದ ಹೊರವಲಯದ ಶ್ರೀ ಮಾದರ ಚೆನ್ನಯ್ಯ ಗುರುಪೀಠದ ಪಕ್ಕದಲ್ಲಿರುವ ಮೈದಾನದಲ್ಲಿ ಮೇ ೯ ರಂದು ನಡೆಸಲು ಉದ್ದೇಶಿಸಿರುವ ಬಿ.ಎಸ್.ವೈ. ಅಭಿಮಾನೋತ್ಸವ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ಪೆಂಡಾಲ್ ನಿರ್ಮಾಣ ಕಾಮಗಾರಿ ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಕ್ಷಿಣ ಭಾರತದ ಯಾವ ರಾಜ್ಯದಲ್ಲೂ ಅಧಿಕಾರ ಬಾರದ, ಉತ್ತರ ಭಾರತದ, ವ್ಯಾಪಾರಿಗಳ, ಮೇಲ್ವರ್ಗದವರ ಪಕ್ಷವೆಂದು ಕರೆಯುತ್ತಿದ್ದ ವೇಳೆ ಯಡಿಯೂರಪ್ಪ ಅವರು ತಥಾಕಥಿತ ವರ್ಗಾತೀತ, ರೈತಪರ ಕಾಳಜಿಯೊಂದಿಗೆ ರಾಜ್ಯದಲ್ಲಿ ಆಡಳಿತ ನೀಡಿದ್ದಾರೆ ಎಂದರು.
ಅಂತ ಧೀಮಂತ ನಾಯಕರ ರಾಜಕೀಯ ಜೀವನ ೫೦ ವರ್ಷ ಪೂರೈಸಿದ ಹಿನ್ನಲೆಯಲ್ಲಿ ಅವರಿಗೆ ಅಭೂತಪೂರ್ವ ಸತ್ಕಾರ, ಸನ್ಮಾನ ಮಾಡಬೇಕು. ಆ ಮೂಲಕ ಯಾರೂ ಇಲ್ಲದ ಸಂದರ್ಭದಲ್ಲಿ ಪಕ್ಷ ಕಟ್ಟಿ ಬೆಳೆಸಿ, ತಾನು ಯಾವ ರೀತಿ ಎತ್ತರಕ್ಕೆ ಬೆಳೆಯಬಲ್ಲೆ ಎಂಬುದಕ್ಕೆ ಬಿಎಸ್ವೈ ಉತ್ತಮ ನಿದರ್ಶನ. ಅದು ಈಗಿನ ಹಾಗೂ ಮುಂದಿನ ಪೀಳಿಗೆಗೆ ತಿಳಿಸಲು ಈ ಬೃಹತ್ ಅಭಿಮಾನೋತ್ಸವ ನಡೆಸಲಾಗುತ್ತಿದೆ ಎಂದು ಹೇಳಿದರು.
ಇದೊಂದು ಪಕ್ಷಾತೀತ ಕಾರ್ಯಕ್ರಮವಾಗಿದ್ದು, ದೊಡ್ಡ ಮಟ್ಟದಲ್ಲಿ ಆಯೋಜಿಸಲಾಗುತ್ತಿದೆ. ಬಿಎಸ್ವೈ ಅಭಿಮಾನಿಗಳು, ಕಾರ್ಯಕರ್ತರು ಸಿದ್ಧತೆಯಲ್ಲಿ ತೊಡಗಿದ್ದಾರೆ. ಸುಮಾರು ೧೦ ಲಕ್ಷಕ್ಕೂ ಹೆಚ್ಚು ಮಂದಿ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗುತ್ತಿದೆ. ನೂರಾರು ಮಂದಿ ಸ್ವಾಮೀಜಿಗಳು, ಗಣ್ಯರು ಭಾಗವಹಿಸಲಿದ್ದಾರೆ. ಗೃಹ ಸಚಿವರಾಗಿ ಅಮಿತ್ ಷಾ ಉತ್ತಮ ಆಡಳಿತ ನೀಡುತ್ತಿದ್ದು, ಅವರೇ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಹಾಲಿ-ಮಾಜಿ ಎಂಎಲ್ಎ, ಎಂಪಿ, ಎಂಎಲ್ಸಿಗಳು ಶಕ್ತಿ ಮೀರಿ ಕಾರ್ಯಕ್ರಮ ಯಶಸ್ಸಿಗಾಗಿ ಶ್ರಮಿಸುತ್ತಿದ್ದಾರೆ ಎಂದರು.
ಗೃಹ ಮತ್ತು ವಾಣಿಜ್ಯ ಬಳಕೆ ಎಲ್ಪಿಜಿ, ಪೆಟ್ರೋಲಿಯಂ ಉತ್ಪನ್ನಗಳ ಸಮಸ್ಯೆ ಹೆಚ್ಚಾಗುತ್ತಿದೆ ಎಂಬ ಕಾಂಗ್ರೇಸಿಗರ ಆರೋಪ ಕುರಿತು ಪ್ರತಿಕ್ರಿಯಿಸಿದ ಅವರು, ಬೆಲೆ ಹೆಚ್ಚಳ ಸಂಬಂಧ ಟೀಕಿಸುವ ಕಾಂಗ್ರೆಸ್ಸಿಗರಿಗೆ ಅಧಿಕಾರದಲ್ಲಿದ್ದಾಗ ಅವರ ಹಳೆಯ ಹೇಳಿಕೆಗಳೇ ಉತ್ತರ ನೀಡಲಿವೆ. ಈ ಹಿಂದೆ ೬೦ ಡಾಲರ್ ಇದ್ದ ಬ್ಯಾರಲ್ ಕಚ್ಚಾ ತೈಲದ ಬೆಲೆ ಈಗ ೧೨೦ ಡಾಲರ್ಗೆ ಏರಿಕೆಯಾಗಿದೆ. ಈ ಹಿಂದೆ ಮನಮೋಹನ ಸಿಂಗ್ ನಾವೇನು ದುಡ್ಡಿನ ಗಿಡ ಹಾಕಿಲ್ಲ. ಹಾಗಾಗಿ ಇಂಧನ ಬೆಲೆ ಏರಿಕೆ ಮಾಡಿದ್ದೇವೆ ಎಂದಿದ್ದರು. ಆಗ ಯಾವುದೇ ಯುದ್ದದ ತೊಂದರೆ ಇರಲಿಲ್ಲ. ವಿಶ್ವದ ಅನೇಖ ರಾಷ್ಟ್ರಗಳಲ್ಲಿ ಇಂಧನ ಕೊರತೆ ಉಂಟಾಗಿದೆ. ಆದರೆ ಭಾರತದಲ್ಲಿ ಎಲ್ಲಿಯಾದರೂ ಸಮಸ್ಯೆ ಆಗಿದೆಯಾ ಎಂದು ಪ್ರಶ್ನಿಸಿದರು.
ಪೆಟ್ರೋಲ್ ಮತ್ತು ಡೀಸೆಲ್ ಖಾಲಿಯಾಗಲಿದೆ. ಹಾಗಾಗಿ ಎಲ್ಲರೂ ಬೇಗ ಸಂಗ್ರಹ ಮಾಡಿಕೊಳ್ಳಿ ಎಂದು ರಾಹುಲ್ ಗಾಂಧಿ ದೇಶದ ಜನರಿಗೆ ಕರೆ ನೀಡಿದ್ದರು. ಅವರ ಬೇಜವಾಬ್ದಾರಿ ಹೇಳಿಕೆ ನಂತರವೂ ಯಾರಿಗಾದರೂ ತೊಂದರೆ ಆಗಿದೆಯಾ? ನಮ್ಮ ಸರ್ಕಾರ ಪೂರ್ವ ಸಿದ್ಧತೆ ಮಾಡಿಕೊಂಡಿದ್ದು, ಮೊದಲೆಲ್ಲ ೨೧ ಕಡೆಗಳಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು. ಆದರೀಗ ೪೩ ಕಡೆಗಳಿಂದ ತರಿಸಿಕೊಳ್ಳಲಾಗುತ್ತಿದೆ. ಕಾರಣ ತಿಳಿಯದೆ ಲೂಟಿ ಎನ್ನುವ ಸಿದ್ದರಾಮಯ್ಯ ಸಿಎಂ ಆದ ನಂತರ ಮೂರು ಬಾರಿ ಹೆಚ್ಚಿಸಿದ್ದು ಏಕೆ?. ಸತ್ಯ ಗೊತ್ತಿದ್ದರೂ ಸಿಎಂ ಕುರ್ಚಿ ಉಳಿಸಿಕೊಳ್ಳಲು ಕೇಂದ್ರ ಸರ್ಕಾರವನ್ನು ತೆಗಳುತ್ತಿದ್ದಾರೆ ಎಂದು ಕಿಡಿಕಾರಿದರು.
ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ವಿಧಾನ ಪರಿಷತ್ ಮಾಜಿ ಸದಸ್ಯ ವೈ.ಎ.ನಾರಾಯಣಸ್ವಾಮಿ, ರಾಜ್ಯ ಕಾರ್ಯದರ್ಶಿ ತಮೇಶ್ ಗೌಡ್ರು, ಶರಣು ತಳ್ಳಿಕೆರೆ, ವಿಭಾಗ ಸಹಾ ಪ್ರಬಾರಿ ಎ.ಮುರಳಿ, ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾಧುರಿ ಗೀರೀಶ್, ವೆಂಕಟೇಶ್ ಯಾದವ್, ಡಾ.ಮಂಜುನಾಥ್, ಮೋಹನ್ ಕುಮಾರ್, ಮಾಜಿ ಪ್ರಧಾನ ಕಾರ್ಯದರ್ಶಿ ಸಂಪತ್ಕುಮಾರ್, ಜಿಲ್ಲಾ ವಕ್ತಾರ ನಾಗರಾಜ್ ಬೇದ್ರೆ, ಸಹ ವಕ್ತಾರ ಚಾಲುಕ್ಯ ನವೀನ್, ಎಸ್.ಸಿ. ಮೋರ್ಚಾದ ಅಧ್ಯಕ್ಷ ಪರಶುರಾಮ್, ರಾಜ್ಯ ರೈತ ಮೋರ್ಚಾದ ಮಲ್ಲಿಕಾರ್ಜನ್, ರಾಜ್ಯ ಯುವ ಮೋರ್ಚಾದ ಕಾರ್ಯದರ್ಶಿ ಭಾರ್ಗವಿ ದ್ರಾವಿಡ್, ಮೋಹನ್ ಸಿರಿಗೆರೆ, ಯಶವಂತ, ಗ್ರಾಮಾಂತರ ಅಧ್ಯಕ್ಷ ನಾಗರಾಜ್ ಸೇರಿದಂತೆ ಇತರರು ಹಾಜರಿದ್ದರು.



