May 2, 2026
Saturday, May 2, 2026
spot_img

ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ‘ಬಾಂಬ್ ಬ್ಲಾಸ್ಟ್’ ಅಂತ ಅನ್ಕೊಂಡ ಜನ: ಆದ್ರೆ ಅಲ್ಲಿ ಆಗಿದ್ದೇ ಬೇರೆ

ಹೊಸದಿಗಂತ ವರದಿ ಬೆಳಗಾವಿ:

ಬೆಳಗಾವಿ ನಗರದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಆವರಣದಲ್ಲಿ ಇಂದು ಮಧ್ಯಾಹ್ನ ಏಕಾಏಕಿ ಕೇಳಿಬಂದ ಬಾಂಬ್ ಸ್ಫೋಟದಂತಹ ಭಾರಿ ಶಬ್ದ ಮತ್ತು ದಟ್ಟವಾದ ಹೊಗೆ ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿತು. ರೋಗಿಗಳು ಹಾಗೂ ಅವರ ಸಂಬಂಧಿಕರು ಭಯದಿಂದ ಆಸ್ಪತ್ರೆಯಿಂದ ಹೊರಗೆ ಓಡಿ ಬಂದ ದೃಶ್ಯಗಳು ಕಂಡುಬಂದವು. ಆಸ್ಪತ್ರೆಯ ಸಿಬ್ಬಂದಿ ಕೂಡ ಕ್ಷಣಕಾಲ ದಿಕ್ಕು ತೋಚದಂತಾಗಿದ್ದರು.

ಮಧ್ಯಾಹ್ನದ ವೇಳೆಗೆ ಆಸ್ಪತ್ರೆಯ ಒಂದು ಭಾಗದಲ್ಲಿ ದಟ್ಟ ಹೊಗೆ ಆವರಿಸಿಕೊಂಡಿತು. ಸೈರನ್ ಮೊಳಗಿಸುತ್ತಾ ಅಗ್ನಿಶಾಮಕ ವಾಹನಗಳು ಮತ್ತು ರಾಜ್ಯ ವಿಪತ್ತು ಸ್ಪಂದನಾ ಪಡೆ (SDRF) ಸ್ಥಳಕ್ಕೆ ಧಾವಿಸಿದಾಗ, ನಿಜವಾಗಿಯೂ ಭಯೋತ್ಪಾದಕ ದಾಳಿ ನಡೆದಿದೆಯೇ ಎಂಬ ಸಂಶಯ ಜನರಲ್ಲಿ ಮೂಡಿತು. 7-8 ರೋಗಿಗಳು ರಕ್ತಸಿಕ್ತವಾಗಿ ಬಿದ್ದಿರುವುದು ಮತ್ತು ಅಂಬುಲೆನ್ಸ್‌ಗಳ ಓಡಾಟ ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರಗೊಳಿಸಿತು.

ಆದರೆ, ಈ ಎಲ್ಲಾ ಆತಂಕದ ಕ್ಷಣಗಳು ವಾಸ್ತವವಾಗಿ ಸಾರ್ವಜನಿಕರ ಸುರಕ್ಷತೆಗಾಗಿ ಹಮ್ಮಿಕೊಂಡಿದ್ದ ‘ಟ್ರಯಾಸ್ ಮಾಕ್ ಡ್ರಿಲ್’ ಆಗಿತ್ತು. ಅಗ್ನಿಶಾಮಕ ದಳ, ರೆಡ್ ಕ್ರಾಸ್, ಸಿವಿಲ್ ಡಿಫೆನ್ಸ್ ಹಾಗೂ ಹೋಮ್‌ಗಾರ್ಡ್‌ಗಳ ಸಹಯೋಗದೊಂದಿಗೆ ಈ ಅಣಕು ಕಾರ್ಯಾಚರಣೆಯನ್ನು ಆಯೋಜಿಸಲಾಗಿತ್ತು.

ಅಗ್ನಿಶಾಮಕ ಸಿಬ್ಬಂದಿಗಳು ಉಸಿರಾಟದ ಸುರಕ್ಷತಾ ಸಾಧನಗಳನ್ನು ಧರಿಸಿ, ಹೊಗೆ ತುಂಬಿದ ಕೊಠಡಿಗಳಿಂದ ರೋಗಿಗಳನ್ನು ಸಾಹಸಮಯವಾಗಿ ಹೊರತಂದರು. ಗಂಭೀರವಾಗಿ ಗಾಯಗೊಂಡವರಿಗೆ ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ನೀಡುವುದು ಮತ್ತು ತಕ್ಷಣವೇ ಬೇರೆ ಆಸ್ಪತ್ರೆಗೆ ಸ್ಥಳಾಂತರಿಸುವ ತಾಲೀಮು ನಡೆಸಲಾಯಿತು. ಬಾಂಬ್ ದಾಳಿ ಅಥವಾ ಬೆಂಕಿ ಅವಘಡದಂತಹ ತುರ್ತು ಪರಿಸ್ಥಿತಿಯಲ್ಲಿ ಜನರು ಗಾಬರಿಗೊಳ್ಳದೆ ಹೇಗೆ ಸ್ಪಂದಿಸಬೇಕು ಎಂಬುದನ್ನು ನೈಜವಾಗಿ ತೋರಿಸಿಕೊಡಲಾಯಿತು.

ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ರಂಗನಾಥ್, “ವಿಪತ್ತು ಸಂಭವಿಸಿದಾಗ ಸಮಯಪ್ರಜ್ಞೆ ಮೆರೆಯುವುದೇ ಮುಖ್ಯ. ಜನರಲ್ಲಿ ಜಾಗೃತಿ ಮೂಡಿಸಲು ಮತ್ತು ನಮ್ಮ ತಂಡಗಳ ಸನ್ನದ್ಧತೆಯನ್ನು ಪರೀಕ್ಷಿಸಲು ಈ ಕೃತಕ ವಿಪತ್ತಿನ ವಾತಾವರಣ ಸೃಷ್ಟಿಸಲಾಗಿತ್ತು,” ಎಂದು ತಿಳಿಸಿದರು.

ಕ್ಷಣಕಾಲ ಬೆಚ್ಚಿಬಿದ್ದರೂ ಸಹ, ಜಿಲ್ಲಾಡಳಿತ ಮತ್ತು ಸುರಕ್ಷತಾ ಪಡೆಗಳ ಈ ಮುನ್ನೆಚ್ಚರಿಕಾ ಕ್ರಮಕ್ಕೆ ಬೆಳಗಾವಿ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !