ಹೊಸದಿಗಂತ ಮುಂಡಗೋಡ:
ಪಟ್ಟಣದಲ್ಲಿ ಸಂಚಲನ ಮೂಡಿಸಿದ್ದ ರೌಡಿಶೀಟರ್ ಜಮೀರ್ ಅಹ್ಮದ್ ದರ್ಗಾವಾಲೆ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಇದರೊಂದಿಗೆ ಈ ಭೀಕರ ಕೊಲೆ ಪ್ರಕರಣದಲ್ಲಿ ಬಂಧಿತರಾದವರ ಒಟ್ಟು ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ.
ಬಂಧಿತ ಆರೋಪಿಯನ್ನು ಪಟ್ಟಣದ ಇಂದಿರಾ ನಗರದ ನಿವಾಸಿ ತನ್ವೀರ್ ಅಹ್ಮದ್ ಅಕ್ಕಿಆಲೂರ ಎಂದು ಗುರುತಿಸಲಾಗಿದೆ. ಈತ ಪ್ರಕರಣದ ಪ್ರಮುಖ ಸಂಚುಕೋರ ಮಂಜುನಾಥ ಕಾಜಗಾರನ ಅತ್ಯಂತ ಆಪ್ತ ಹಾಗೂ ಬಲಗೈ ಬಂಟನಾಗಿದ್ದ ಎನ್ನಲಾಗಿದೆ. ಈ ಹಿಂದೆ ಅಕ್ರಮ ಬಡ್ಡಿ ವ್ಯವಹಾರದಲ್ಲೂ ಭಾಗಿಯಾಗಿದ್ದ ತನ್ವೀರ್ ವಿರುದ್ಧ ಈಗಾಗಲೇ ಪ್ರಕರಣ ದಾಖಲಾಗಿತ್ತು.
ತನಿಖೆಯ ವೇಳೆ ಪೊಲೀಸರಿಗೆ ದೊರೆತ ಮಾಹಿತಿ ಪ್ರಕಾರ, ಏಪ್ರಿಲ್ 24ರಂದು ಜಮೀರ್ ಹತ್ಯೆ ಮಾಡಲು ಬಂದಿದ್ದ ಸುಪಾರಿ ಹಂತಕರಿಗೆ ತನ್ವೀರ್ ಬೈಕ್ ವ್ಯವಸ್ಥೆ ಮಾಡಿಕೊಟ್ಟಿದ್ದನು. ಕೊಲೆ ನಡೆದ ಬೆನ್ನಲ್ಲೇ ತನ್ನ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಪೊಲೀಸರ ಕಣ್ಣು ತಪ್ಪಿಸಲು ಯತ್ನಿಸಿದ್ದನು. ಆರಂಭಿಕ ವಿಚಾರಣೆಯ ನಂತರ ಬಿಡುಗಡೆ ಹೊಂದಿದ್ದ ಈತನನ್ನು, ತಾಂತ್ರಿಕ ಸಾಕ್ಷ್ಯಗಳ ಆಧಾರದ ಮೇಲೆ ಪೊಲೀಸರು ಮರು ವಿಚಾರಣೆ ನಡೆಸಿದಾಗ ಕೊಲೆಗೆ ಸಹಕರಿಸಿದ ಸತ್ಯ ಒಪ್ಪಿಕೊಂಡಿದ್ದಾನೆ.
ಪೊಲೀಸ್ ಮೂಲಗಳ ಪ್ರಕಾರ, ಜಮೀರ್ ಹತ್ಯೆಗೆ ಕಳೆದ ಡಿಸೆಂಬರ್ ತಿಂಗಳಿನಲ್ಲೇ ಸಂಚು ರೂಪಿಸಲಾಗಿತ್ತು. ಆರೋಪಿಗಳಾದ ದಿಲ್ ರಾಜ್ ದ್ಯಾನಿ ಮತ್ತು ಮಂಜುನಾಥ ಕಾಜಗಾರ ಜೈಲಿನಲ್ಲಿದ್ದಾಗಲೇ ಗೆಳೆಯರಾಗಿದ್ದರು. ಹರ್ಷಾ ಕೊಲೆ ಕೇಸ್‌ನಲ್ಲಿ ಜೈಲು ಸೇರಿದ್ದ ಕಾಜಗಾರ, ದೆಹಲಿ ಮೂಲದ ದಿಲ್ ರಾಜ್‌ಗೆ ಜಾಮೀನು ಪಡೆಯಲು ಸಹಾಯ ಮಾಡಿದ್ದನು. ಇದಕ್ಕೆ ಪ್ರತಿಯಾಗಿ ಜಮೀರ್ ಹತ್ಯೆಯ ಸುಪಾರಿಯನ್ನು ದಿಲ್ ರಾಜ್‌ಗೆ ನೀಡಲಾಗಿತ್ತು. ಡಿಸೆಂಬರ್‌ನಲ್ಲಿ ಒಮ್ಮೆ ಹತ್ಯೆಗೆ ಪ್ರಯತ್ನಿಸಿ ವಿಫಲವಾಗಿದ್ದ ದಿಲ್ ರಾಜ್, ಏಪ್ರಿಲ್‌ನಲ್ಲಿ ತನ್ನ ಸಹಚರರೊಂದಿಗೆ ಸೇರಿ ಜಮೀರ್‌ನನ್ನು ಬರ್ಬರವಾಗಿ ಕೊಲೆ ಮಾಡಿದ್ದನು.
ತನಿಖೆಯ ಹಂತಗಳು:
ಕೊಲೆ ನಡೆದ 24 ಗಂಟೆಯೊಳಗೆ ಐವರು ಆರೋಪಿಗಳ ಬಂಧನ.
ಹಂತಕರಿಗೆ ಪಿಸ್ತೂಲ್ ಪೂರೈಸಿದ ಆರನೇ ಆರೋಪಿಯ ಸೆರೆ.
ಬೈಕ್ ನೀಡಿ ಸಹಕರಿಸಿದ ಏಳನೇ ಆರೋಪಿ ತನ್ವೀರ್ ಈಗ ಪೊಲೀಸ್ ವಶಕ್ಕೆ.
ಪ್ರಸ್ತುತ ಬಂಧಿತ ತನ್ವೀರ್‌ನನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ. ಮುಂಡಗೋಡ ಪೊಲೀಸರ ಈ ಕ್ಷಿಪ್ರ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.



