ಹೊಸದಿಗಂತ ದಾಂಡೇಲಿ:
ನಗರದ ಸಾರ್ವಜನಿಕ ಸೌಲಭ್ಯಗಳ ಕೊರತೆ ಇಂದು ಒಬ್ಬ ವ್ಯಕ್ತಿಯ ಪ್ರಾಣಕ್ಕೆ ಸಂಚಕಾರ ತಂದೊಡ್ಡಿದೆ. ಇಲ್ಲಿನ ಕುಳಗಿ ರಸ್ತೆಯ ನಿವಾಸಿ ಆನಂದ ಲಲ್ಲೂಜಿ ಮಣ್ಣವಡ್ಡರ (42) ಎಂಬುವವರು ಭಾನುವಾರ ಬೆಳಿಗ್ಗೆ ಕಾಳಿ ನದಿಯಲ್ಲಿ ಮೊಸಳೆ ದಾಳಿಗೆ ಒಳಗಾಗಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಕುಳಗಿ ರಸ್ತೆಯ ನಿವಾಸಿಯಾಗಿರುವ ಆನಂದ ಅವರು ನಿತ್ಯಕರ್ಮಕ್ಕಾಗಿ ಸಮೀಪದ ಸಾರ್ವಜನಿಕ ಶೌಚಾಲಯಕ್ಕೆ ತೆರಳಿದ್ದರು. ಆದರೆ, ದೀರ್ಘಕಾಲದಿಂದ ಸರಿಯಾದ ನಿರ್ವಹಣೆ ಇಲ್ಲದೆ ಶೌಚಾಲಯವು ಬಳಸಲಾಗದ ಸ್ಥಿತಿಯಲ್ಲಿದ್ದ ಕಾರಣ, ಅನಿವಾರ್ಯವಾಗಿ ಅವರು ಪಕ್ಕದಲ್ಲೇ ಹರಿಯುವ ಕಾಳಿ ನದಿಗೆ ಇಳಿದಿದ್ದಾರೆ. ಈ ವೇಳೆ ನದಿಯಲ್ಲಿದ್ದ ಮೊಸಳೆಯೊಂದು ಏಕಾಏಕಿ ಅವರ ಮೇಲೆರಗಿ, ಅವರನ್ನು ನೀರಿನೊಳಗೆ ಎಳೆದೊಯ್ಯಲು ಯತ್ನಿಸಿದೆ.
ಮೊಸಳೆಯ ಬಾಯಿಗೆ ಸಿಲುಕಿದ ಆನಂದ ಅವರು ಜೀವಭಯದಿಂದ ಕಿರುಚಿಕೊಂಡಾಗ, ಶಬ್ದ ಕೇಳಿದ ಸ್ಥಳೀಯ ನಿವಾಸಿಗಳು ತಕ್ಷಣ ಸ್ಥಳಕ್ಕೆ ಧಾವಿಸಿ ಗಲಾಟೆ ಮಾಡುವ ಮೂಲಕ ಮೊಸಳೆಯನ್ನು ಓಡಿಸಿದ್ದಾರೆ. ಇದರಿಂದ ಆನಂದ ಅವರು ಪ್ರಾಣಾಪಾಯದಿಂದ ಪಾರಾಗಿದ್ದರೂ, ಅವರ ಕಾಲು ಮತ್ತು ದೇಹದ ಇತರ ಭಾಗಗಳಿಗೆ ಗಂಭೀರ ಗಾಯಗಳಾಗಿವೆ.
ಗಾಯಾಳುವನ್ನು ತಕ್ಷಣವೇ ದಾಂಡೇಲಿಯ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡದ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನಾ ಸ್ಥಳಕ್ಕೆ ಸಿಪಿಐ ಶಿವಾನಂದ ಅಂಬಿಗೇರ, ಪಿಎಸ್ಐ ಅಮೀನ್ ಅತ್ತಾರ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನಗರಸಭೆಯ ನಿರ್ಲಕ್ಷ್ಯದ ವಿರುದ್ಧ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. “ಸಾರ್ವಜನಿಕ ಶೌಚಾಲಯಗಳನ್ನು ಸರಿಯಾಗಿ ನಿರ್ವಹಣೆ ಮಾಡಿದ್ದರೆ ಇಂತಹ ಘಟನೆ ನಡೆಯುತ್ತಿರಲಿಲ್ಲ. ಅಧಿಕಾರಿಗಳ ಬೇಜವಾಬ್ದಾರಿಯೇ ಈ ಅವಘಡಕ್ಕೆ ಕಾರಣ” ಎಂದು ಜನರು ದೂರಿದ್ದಾರೆ. ನದಿ ತೀರದ ನಿವಾಸಿಗಳಿಗೆ ಸೂಕ್ತ ಶೌಚಾಲಯ ವ್ಯವಸ್ಥೆ ಕಲ್ಪಿಸಬೇಕೆಂದು ಒತ್ತಾಯ ಕೇಳಿಬಂದಿದೆ.



