ಹೊಸದಿಗಂತ ವರದಿ, ಬೆಳಗಾವಿ :
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಇರುವ ಶಕ್ತಿ ಕರ್ನಾಟಕದಲ್ಲಿ ಯಾರಿಗೂ ಇಲ್ಲ. ಅವರನ್ನು ಬೇರೆಯವರೊಂದಿಗೆ ಹೋಲಿಕೆ ಮಾಡಲು ಸಾಧ್ಯವಿಲ್ಲ. ಅವರು ಕರ್ನಾಟಕಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಅಭಿಮಾನಿಗಳೆಲ್ಲ ಸೇರಿ ಬಿಎಸ್ವೈ ಅಭಿಮಾನೋತ್ಸವ ಆಚರಿಸುತ್ತಿದ್ದೇವೆ ಎಂದು ಡಾ.ಪ್ರಭಾಕರ ಕೋರೆ ಹೇಳಿದರು.
ಮಂಗಳವಾರ ನಗರದ ಕನ್ನಡಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿತ್ರದುರ್ಗದಲ್ಲಿ ಇದೇ ಮೇ 9 ರಂದು ನಡೆಯಲಿರುವ ಸಮಾವೇಶ ಜಾತ್ಯತೀತ, ಪಕ್ಷಾತೀತ. ಸುಮಾರು 10 ಲಕ್ಷ ಜನರ ನಿರೀಕ್ಷೆ ಇದೆ. 5 ಲಕ್ಷ ಆಸನಗಳನ್ನು ವ್ಯವಸ್ಥೆ ಮಾಡಲಾಗುತ್ತಿದೆ ಎಂದರು .
ಸುವರ್ಣ ವಿಧಾನಸೌಧ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ನಿಜಲಿಂಗಪ್ಪ ಸಕ್ಕರೆ ಸಂಸ್ಥೆ ಸೇರಿದಂತೆ ಬೆಳಗಾವಿ ಜಿಲ್ಲೆಗೆ ಬಹಳ ದೊಡ್ಡಮಟ್ಟದಲ್ಲಿ ಯಡಿಯೂರಪ್ಪ ಕೊಡುಗೆ ನೀಡಿದ್ದಾರೆ. ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರದಿಂದ ಕನಿಷ್ಟ ಒಂದು ಸಾವಿರ ಜನರು ಪಾಲ್ಗೊಳ್ಳಲಿದ್ದಾರೆ ಎಂದರು.
ಇದೇ ವೇಳೆ ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಮಾತನಾಡಿ, ಸುವರ್ಣ ವಿಧಾನ ಸೌಧ ನಿರ್ಮಾಣ ಸೇರಿದಂತೆ ಬೆಳಗಾವಿಗೆ ಯಡಿಯೂರಪ್ಪ ಕೊಡುಗೆ ದೊಡ್ಡ ಮಟ್ಟದ್ದು. ಕಾಯಕ ಮತ್ತು ದಾಸೋಹ ತತ್ವಗಳ ಮಠಗಳಿಗೆ ಸಾಕಷ್ಟು ಅನುದಾನ ನೀಡಿದ್ದಾರೆ. ಹಾಗಾಗಿ ಸಾವಿರಾರು ಮಠಾಧೀಶರೂ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ರವಾಹ ಬಂದ ಸಂದರ್ಭದಲ್ಲಿ ನಿಯಮ ಮೀರಿ ದೊಡ್ಡ ಮಟ್ಟದ ನೆರವು ನೀಡಿದ್ದಾರೆ. ಜನಪರ ಕಾಳಜಿಯ ನಾಯಕರಾದ ಅವರು ರಾಜಕಾರಣ ಮತ್ತು ಸಮಾಜಕಾರ್ಯ ಎರಡನ್ನೂ ಆದರ್ಶವಾಗಿ ನಡೆಸಿಕೊಂಡು ಬಂದಿದ್ದಾರೆ ಎಂದರು.
ಈ ವೇಳೆ ಮಾಜಿ ಸಂಸದೆ ಮಂಗಲಾ ಅಂಗಡಿ, ಗೀತಾ ಸುತಾರ, ಸುಭಾಷ ಪಾಟೀಲ, ಅನಿಲ ಬೆನಕೆ, ರಮೇಶ ದೇಶಪಾಂಡೆ, ರಾಜೇಂದ್ರ ಹರಕುಣಿ, ಡಾ.ರವಿ ಪಾಟೀಲ, ಮುರುಘೇಂದ್ರ ಪಾಟೀಲ ಸೇರಿದಂತೆ ಬಿಜೆಪಿ ಹಲವರು ಇದ್ದರು.



