July 1, 2026
Wednesday, July 1, 2026
spot_img

ಬೀದರ್ ರೌಡಿಗಳಿಗೆ ಗಡಿಪಾರು ಶಿಕ್ಷೆ: ಸಾರ್ವಜನಿಕ ಶಾಂತಿ ಕದಡುವ ಮುನ್ನ ಎಚ್ಚರ!

ಹೊಸದಿಗಂತ ಬೀದರ್:

ಬೀದರ್ ಜಿಲ್ಲೆಯಲ್ಲಿ ನಿರಂತರವಾಗಿ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು, ಸಾರ್ವಜನಿಕ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಗೆ ಸವಾಲಾಗಿದ್ದ ಇಬ್ಬರು ಕುಖ್ಯಾತ ಎಂಒಬಿ (MOB) ಶೀಟರ್‌ಗಳನ್ನು ಗಡಿಪಾರು ಮಾಡಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಗಾಂಧಿಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಇರಾನಿ ಕಾಲೋನಿಯ ನಿವಾಸಿಗಳಾದ ರಹೆಮತ್ ಹುಸೇನ್ (25) ಮತ್ತು ಜಾವಿದ್ ಅಲಿ ಉರ್ಫ್ ಜಂಬೂ (38) ಗಡಿಪಾರಾದ ಆರೋಪಿಗಳು.

ಯಾರಿಗೆ ಎಲ್ಲಿಗೆ ಶಿಕ್ಷೆ?

ರಹೆಮತ್ ಹುಸೇನ್ (25): ಈತನ ವಿರುದ್ಧ ಮಾರಕಾಯುಧಗಳ ಬಳಕೆ, ಸುಲಿಗೆ, ಕಳ್ಳತನ, ಗಾಂಜಾ ಸಾಗಾಟ ಹಾಗೂ ಜೀವ ಬೆದರಿಕೆ ಸೇರಿದಂತೆ ಒಟ್ಟು 6 ಗಂಭೀರ ಪ್ರಕರಣಗಳು ದಾಖಲಾಗಿದ್ದವು. ಈತನನ್ನು ಉತ್ತರ ಕನ್ನಡ (ಕಾರವಾರ) ಜಿಲ್ಲೆಗೆ ಗಡಿಪಾರು ಮಾಡಲಾಗಿದೆ.

ಜಾವಿದ್ ಅಲಿ ಉರ್ಫ್ ಜಂಬೂ (38): ಈತನ ಮೇಲೂ ಗಾಂಜಾ ಮಾರಾಟ, ಸಾರ್ವಜನಿಕರೊಂದಿಗೆ ಗಲಾಟೆ ಮತ್ತು ಜೀವ ಬೆದರಿಕೆಯ 5 ಪ್ರಕರಣಗಳಿದ್ದವು. ಸುಧಾರಿಸದ ಹಿನ್ನೆಲೆಯಲ್ಲಿ ಈತನನ್ನು ಚಾಮರಾಜನಗರ ಜಿಲ್ಲೆಗೆ ಉಚ್ಚಾಟಿಸಲಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಠಿಣ ಸಂದೇಶ

ಜಿಲ್ಲೆಯಲ್ಲಿ ಕ್ರಿಮಿನಲ್ ಚಟುವಟಿಕೆಗಳ ಮೂಲಕ ಸಾರ್ವಜನಿಕರ ನೆಮ್ಮದಿ ಕೆಡಿಸುವವರ ವಿರುದ್ಧ ಇಂತಹ ಕಠಿಣ ಕ್ರಮಗಳು ಮುಂದುವರಿಯಲಿವೆ ಎಂದು ಬೀದರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಪ್ರದೀಪ್ ಗುಂಟಿ ಅವರು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ. ಕಾನೂನುಬಾಹಿರ ದಂಧೆಗಳಿಂದ ದೂರವಿದ್ದು, ತಮ್ಮ ಹಾಗೂ ತಮ್ಮ ಕುಟುಂಬದ ಭವಿಷ್ಯವನ್ನು ಹಾಳು ಮಾಡಿಕೊಳ್ಳದಂತೆ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !