May 7, 2026
Thursday, May 7, 2026
spot_img

ಮಳೆಯ ನೀರಿನ ಹೊಂಡದಲ್ಲಿ ಈಜಲು ಹೋದ ಬಾಲಕ ನೀರುಪಾಲು

ಹೊಸದಿಗಂತ ಕಲಬುರಗಿ:

ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದ ಹೊರವಲಯದಲ್ಲಿರುವ ಡಿಗ್ಗಿ ತಾಂಡಾದಲ್ಲಿ ಮನಕಲಕುವ ಘಟನೆಯೊಂದು ಜರುಗಿದೆ. ಮಳೆಯ ನೀರು ತುಂಬಿದ್ದ ಹೊಂಡದಲ್ಲಿ ಈಜಲು ತೆರಳಿದ್ದ ಬಾಲಕನೋರ್ವ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.

ಮೃತ ಬಾಲಕನನ್ನು ಡಿಗ್ಗಿ ತಾಂಡಾ ನಿವಾಸಿ ರಿತೇಶ್ (12) ಎಂದು ಗುರುತಿಸಲಾಗಿದೆ. ರೈಲ್ವೆ ಕಾಮಗಾರಿಗಾಗಿ ಈ ಭಾಗದಲ್ಲಿ ಬೃಹತ್ ಹೊಂಡವನ್ನು ತೋಡಲಾಗಿತ್ತು. ಇತ್ತೀಚೆಗೆ ಸುರಿದ ಮಳೆಯಿಂದಾಗಿ ಈ ಹೊಂಡದಲ್ಲಿ ಅಪಾರ ಪ್ರಮಾಣದ ನೀರು ಸಂಗ್ರಹವಾಗಿತ್ತು. ಗುರುವಾರ ರಿತೇಶ್ ತನ್ನ ಸ್ನೇಹಿತರೊಂದಿಗೆ ಈಜಾಡಲು ಈ ಹೊಂಡಕ್ಕೆ ಇಳಿದಿದ್ದನು. ಆದರೆ ನೀರಿನ ಆಳ ತಿಳಿಯದ ಕಾರಣ ಆತ ದುರದೃಷ್ಟವಶಾತ್ ಮುಳುಗಿ ಮೃತಪಟ್ಟಿದ್ದಾನೆ.

ಬಾಲಕ ಮುಳುಗುತ್ತಿದ್ದಂತೆ ಜೊತೆಯಲ್ಲಿದ್ದ ಸ್ನೇಹಿತರು ಕಿರುಚಾಡಿದ್ದು, ತಕ್ಷಣ ಸ್ಥಳಕ್ಕೆ ಧಾವಿಸಿದ ಸ್ಥಳೀಯರು ರಿತೇಶ್‌ನ ಮೃತದೇಹವನ್ನು ಹೊಂಡದಿಂದ ಹೊರತೆಗೆದಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ವಾಡಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ರೈಲ್ವೆ ಕಾಮಗಾರಿಯ ಹೊಂಡವು ಬಾಲಕನ ಪಾಲಿಗೆ ಮೃತ್ಯುಕೂಪವಾಗಿ ಪರಿಣಮಿಸಿದ್ದು, ತಾಂಡಾದಲ್ಲಿ ಶೋಕದ ಛಾಯೆ ಆವರಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !