ಹೊಸದಿಗಂತ ವಿಜಯಪುರ:
ಜಮೀನಿನಲ್ಲಿ ವಿದ್ಯುತ್ ಕಂಬ ಅಳವಡಿಸುವ ವಿಚಾರದಲ್ಲಿ ಅಧಿಕಾರಿಗಳು ಹಾಗೂ ರೈತನ ನಡುವಿನ ಸಂಘರ್ಷ ತಾರಕಕ್ಕೇರಿದ್ದು, ನ್ಯಾಯಯುತ ಪರಿಹಾರಕ್ಕಾಗಿ ಆಗ್ರಹಿಸಿ ರೈತನೊಬ್ಬ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜಿಲ್ಲೆಯ ಕೊಲ್ಹಾರ ತಾಲೂಕಿನ ತಳೇವಾಡ ಗ್ರಾಮದಲ್ಲಿ ನಡೆದಿದೆ.
ತಳೇವಾಡ ಗ್ರಾಮದ ನಿವಾಸಿ ಮಲ್ಲನಗೌಡ ಹನುಮಂತಗೌಡ ಬಿರಾದಾರ (44) ಎಂಬುವವರೇ ಆತ್ಮಹತ್ಯೆಗೆ ಯತ್ನಿಸಿದ ದುರ್ದೈವಿ ರೈತ. ಜಿಲ್ಲೆಯ ಕುಡಗಿ ಎನ್‌ಟಿಪಿಸಿ ಘಟಕದಿಂದ ಮಹಾರಾಷ್ಟ್ರದ ಸೊಲ್ಲಾಪುರಕ್ಕೆ ವಿದ್ಯುತ್ ಪೂರೈಸುವ ಸಲುವಾಗಿ ಡಬ್ಲ್ಯು ಆರ್ ಎಸ್ (WRS) ಕಂಪನಿಯು ವಿದ್ಯುತ್ ಕಂಬಗಳನ್ನು ಅಳವಡಿಸುತ್ತಿದೆ. ಈ ಕಾಮಗಾರಿಗಾಗಿ ಮಲ್ಲನಗೌಡ ಅವರ ಜಮೀನನ್ನು ಬಳಸಿಕೊಳ್ಳಲಾಗುತ್ತಿದೆ.
ಮಲ್ಲನಗೌಡ ಅವರ ಸುಮಾರು 3 ಗುಂಟೆ ಜಮೀನು ಈ ಕಾಮಗಾರಿಯಿಂದ ಹಾನಿಗೊಳಗಾಗುತ್ತಿದೆ. ಇದಕ್ಕೆ ಕಂಪನಿಯು ಕೇವಲ 15 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಭರವಸೆ ನೀಡಿತ್ತು. ಆದರೆ, ಪ್ರಸ್ತುತ ಜಮೀನಿನ ಬೆಲೆ ಹಾಗೂ ಆಗಲಿರುವ ನಷ್ಟವನ್ನು ಪರಿಗಣಿಸಿ 30 ಲಕ್ಷ ರೂಪಾಯಿ ಪರಿಹಾರ ನೀಡಬೇಕೆಂದು ರೈತ ಪಟ್ಟು ಹಿಡಿದಿದ್ದರು.
ಗುರುವಾರ ಪೊಲೀಸರ ರಕ್ಷಣೆಯೊಂದಿಗೆ ಕಂಪನಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಜಮೀನು ಪರಿಶೀಲಿಸಲು ಮುಂದಾದಾಗ ರೈತ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳ ನಡೆಗೆ ಬೇಸತ್ತು, ಸ್ಥಳದಲ್ಲೇ ಕೀಟನಾಶಕ ಸೇವಿಸಿದ್ದಾರೆ. ಕೂಡಲೇ ಅವರನ್ನು ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ವಿಷಯ ತಿಳಿಯುತ್ತಿದ್ದಂತೆಯೇ ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಮಲ್ಲನಗೌಡ ಅವರ ಆರೋಗ್ಯ ವಿಚಾರಿಸಿದರು. ರೈತರನ್ನು ಸಂಕಷ್ಟಕ್ಕೆ ತಳ್ಳುತ್ತಿರುವ ಕಂಪನಿ ಮತ್ತು ಜಿಲ್ಲಾಡಳಿತದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಅತ್ತ ವಿಜಯಪುರ ಉಪವಿಭಾಗಾಧಿಕಾರಿ ಗುರುನಾಥ್ ದಡ್ಡೆ ಅವರು ಕೂಡ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ.
ಸದ್ಯ ಈ ಕುರಿತು ಕೂಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಿಸ್ಥಿತಿ ಉದ್ವಿಗ್ನವಾಗಿದೆ.



