May 7, 2026
Thursday, May 7, 2026
spot_img

ಸಿನಿಮೀಯ ಮಾದರಿಯಲ್ಲಿ ದರೋಡೆ ಮಾಡಿ ಕೋಟಿ ಕೋಟಿ ದೋಚಿದ್ದ ಗ್ಯಾಂಗ್ ಅರೆಸ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹೈದರಾಬಾದ್-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಣಿ ದರೋಡೆ ನಡೆಸಿ ಆತಂಕ ಸೃಷ್ಟಿಸಿದ್ದ ಅಂತರರಾಜ್ಯ ದರೋಡೆಕೋರರ ಜಾಲವನ್ನು ಆಂಧ್ರಪ್ರದೇಶದ ಶ್ರೀ ಸತ್ಯಸಾಯಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಭೀಕರ ಕಿಡ್ನ್ಯಾಪ್ ಮತ್ತು ಬರೋಬ್ಬರಿ ₹5.8 ಕೋಟಿ ನಗದು ಲೂಟಿ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 10 ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಿಂದ ಕೋಟಿಗಟ್ಟಲೆ ನಗದು ಹಾಗೂ ಐಷಾರಾಮಿ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪೊಲೀಸ್ ತನಿಖೆಯ ಪ್ರಕಾರ, ಈ ಗ್ಯಾಂಗ್ ಕೇರಳದಿಂದ ತಮಿಳುನಾಡು ಮತ್ತು ಕರ್ನಾಟಕದ ಮೂಲಕ ಸಂಚರಿಸಿ ವ್ಯವಸ್ಥಿತವಾಗಿ ದರೋಡೆ ಮಾಡುತ್ತಿತ್ತು. ಇವರು ತಮಿಳುನಾಡಿನ ಧರ್ಮಪುರಿಯ ಲಾಡ್ಜ್‌ಗಳಲ್ಲಿ ಮೊಕ್ಕಾಂ ಹೂಡಿ, ಹೆದ್ದಾರಿಯಲ್ಲಿ ಹಣ ಸಾಗಿಸುವ ವಾಹನಗಳ ಬಗ್ಗೆ ಪಕ್ಕಾ ಮಾಹಿತಿ ಕಲೆಹಾಕುತ್ತಿದ್ದರು.

ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ವಾಹನವನ್ನು ಅಡ್ಡಗಟ್ಟಿ, ಕಿಟಕಿ ಗಾಜುಗಳನ್ನು ಪುಡಿಮಾಡಿ ಇಬ್ಬರನ್ನು ಅಪಹರಿಸಿದ್ದರು. ನಂತರ ಅವರಿಂದ ₹2.8 ಕೋಟಿ ದೋಚಿ, ಸಂತ್ರಸ್ತರನ್ನು ನಿರ್ಜನ ಪ್ರದೇಶದಲ್ಲಿ ಬಿಟ್ಟು ಪರಾರಿಯಾಗಿದ್ದರು.

ಎಂಟು ಮಂದಿ ಮುಖವಾಡಧಾರಿಗಳು ಮತ್ತೊಂದು ವಾಹನವನ್ನು ತಡೆದು, ಮಾರಕಾಸ್ತ್ರಗಳಿಂದ ಬೆದರಿಸಿ ₹3 ಕೋಟಿ ನಗದು ಲೂಟಿ ಮಾಡಿದ್ದರು. ಈ ಎರಡೂ ಪ್ರಕರಣಗಳು ಕಿಯಾ ಮತ್ತು ಕನಗಾನಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದವು.

ಪೊಲೀಸರ ಕಣ್ಣಿಗೆ ಮಣ್ಣೆರಚಲು ಈ ಗ್ಯಾಂಗ್ ಅತ್ಯಂತ ಚಾಣಾಕ್ಷತನ ಪ್ರದರ್ಶಿಸಿತ್ತು. ಪ್ರತಿಯೊಂದು ದರೋಡೆಗೂ ಬೇರೆ ಬೇರೆ ವಾಹನ ಮತ್ತು ನಕಲಿ ನಂಬರ್ ಪ್ಲೇಟ್ ಬಳಕೆ. ಫಾಸ್ಟ್ಯಾಗ್ ಮೂಲಕ ಸಿಕ್ಕಿಬೀಳಬಾರದೆಂದು ಟೋಲ್ ಪ್ಲಾಜಾಗಳಲ್ಲಿ ಕೇವಲ ನಗದು ಪಾವತಿ ಮಾಡುತ್ತಿದ್ದರು.

ಪೊಲೀಸರ ಟ್ರ್ಯಾಕಿಂಗ್ ತಪ್ಪಿಸಲು ಕೇರಳದ ನಕಲಿ ಸಿಮ್ ಹಾಗೂ ಮೋಟೋ ಜಿ35 ಮೊಬೈಲ್‌ಗಳ ಮೂಲಕ ಕೇವಲ ಇಂಟರ್ನೆಟ್ ಕರೆಗಳನ್ನು ಬಳಸುತ್ತಿದ್ದರು.

ಈ ಇಡೀ ಗ್ಯಾಂಗ್‌ನಲ್ಲಿ ಒಟ್ಟು 21 ಮಂದಿ ಸದಸ್ಯರಿದ್ದು, ಇದರ ಮಾಸ್ಟರ್ ಮೈಂಡ್ ನೇಪಾಳದಲ್ಲಿ ಕುಳಿತು ನಿರ್ದೇಶನ ನೀಡುತ್ತಿದ್ದ ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಸುಮಾರು 200 ಕಿ.ಮೀ ವ್ಯಾಪ್ತಿಯ ಸಿಸಿಟಿವಿ ದೃಶ್ಯಾವಳಿಗಳನ್ನು ಜಾಲಾಡಿದ ಪೊಲೀಸರಿಗೆ ಈ ಜಾಲದ ಸುಳಿವು ಸಿಕ್ಕಿದೆ.

ಮೇ 5 ರಂದು ಬೆಂಗಳೂರು-ಗೊರಂಟ್ಲ ಹೆದ್ದಾರಿಯ ಅಘೋರ ಆಶ್ರಮದ ಬಳಿ ಪೊಲೀಸರು 7 ಪ್ರಮುಖ ಆರೋಪಿಗಳನ್ನು ಸೆರೆಹಿಡಿದರು. ಬಂಧಿತರಿಂದ ಕೆಳಗಿನವುಗಳನ್ನು ಜಪ್ತಿ ಮಾಡಲಾಗಿದೆ:

ನಗದು: ₹1.26 ಕೋಟಿ.

ವಾಹನಗಳು: ಒಂದು ಬಿಎಂಡಬ್ಲ್ಯೂ (BMW), ಇನೋವಾ ಮತ್ತು ಎಕ್ಸ್‌ಯುವಿ 500.

ಇತರೆ: 13 ಮೊಬೈಲ್‌ಗಳು, ನಕಲಿ ನಂಬರ್ ಪ್ಲೇಟ್‌ಗಳು, ಚಾಕುಗಳು ಮತ್ತು ಪೆಪ್ಪರ್ ಸ್ಪ್ರೇಗಳು.

ಬಂಧಿತರಲ್ಲಿ ಪ್ರಮುಖ ಆರೋಪಿ ಸಿರಿಲ್ ಮ್ಯಾಥ್ಯೂ ಎಂಬಾತನ ಮೇಲೆ ಈಗಾಗಲೇ 15 ಕೇಸ್‌ಗಳು ದಾಖಲಾಗಿವೆ. ಸದ್ಯ 10 ಮಂದಿ ಪೊಲೀಸರ ಅತಿಥಿಯಾಗಿದ್ದು, ತಲೆಮರೆಸಿಕೊಂಡಿರುವ ಉಳಿದ 11 ಮಂದಿಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !