May 7, 2026
Thursday, May 7, 2026
spot_img

ಬಿಎಸ್‌ವೈ ಅಭಿಮಾನೋತ್ಸವಕ್ಕೆ ಭರದ ಸಿದ್ಧತೆ: ಜರ್ಮನ್ ತಂತ್ರಜ್ಞಾನದಲ್ಲಿ ವೇದಿಕೆ ನಿರ್ಮಾಣ

ಹೊಸದಿಗಂತ ವರದಿ, ಚಿತ್ರದುರ್ಗ:

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಅಭಿಮಾನೋತ್ಸವ ಸಮಾರಂಭ ಮೇ 09 ರಂದು ಚಿತ್ರದುರ್ಗದಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಭರದ ಸಿದ್ಧತೆಗಳು ನಡೆಯುತ್ತಿವೆ.

ಅಭಿಮಾನಿಗಳು ಅತ್ಯಂತ ಉತ್ಸಾಹದಿಂದ ವಿವಿಧ ಕಾರ್ಯಗಳನ್ನು ಕೈಗೊಂಡಿದ್ದಾರೆ. ಸಂಸದ ಗೋವಿಂದ ಕಾರಜೋಳ ಕಾರ್ಯಕ್ರಮದ ನೇತೃತ್ವ ವಹಿಸಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮ ಸ್ಥಳಕ್ಕೆ ಪ್ರತಿದಿನ ಭೇಟಿ ನೀಡಿ ಕಾರ್ಯಕ್ರಮದ ಸಿದ್ಧತೆ ಕುರಿತು ಪರಿಶೀಲಿಸುತ್ತಿದ್ದಾರೆ.

ನಗರದ ಹೊರವಲಯದ ಶಿವಶರಣ ಮಾದಾರ ಚೆನ್ನಯ್ಯ ಗುರುಪೀಠದ ಪಕ್ಕದ ಮೈದಾಮದಲ್ಲಿ ಅಭಿಮಾನೋತ್ಸವ ಆಚರಣೆಗೆ ಜರ್ಮನ್ ತಂತ್ರಜ್ಞಾನದಲ್ಲಿ 60 ಅಡಿ ಎತ್ತರ, 200 ಅಡಿ ಉದ್ದ, 140 ಅಡಿ ಅಗಲದ ವಿನೂತನ ಶೈಲಿಯ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿದೆ. ಮುಖ್ಯವಾಗಿ ಮೂರು ವೇದಿಕೆಗಳನ್ನು ನಿರ್ಮಿಸಲಾಗುತ್ತಿದೆ. ಒಂದರಲ್ಲಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ವಿವಿಧ ಮುಖಂಡರು ಆಸೀನರಾಗುವರು. ಈ ವೇದಿಕೆ ಒಂದು ಬದಿಯಲ್ಲಿ ಸುಮಾರು 1000 ವಿವಿಧ ಮಠಾಧೀಶರಿಗೆ ವೇದಿಕೆ ನಿರ್ಮಾಣ ಮಾಡಲಾಗಿದೆ. ಮತ್ತೊಂದು ಬದಿಯಲ್ಲಿ ’ಭಾಗ್ಯಲಕ್ಷ್ಮಿ’ ಸೇರಿದಂತೆ ವಿವಿಧ ಫಲಾನುಗಳಿಗೆ ವೇದಿಕೆ ನಿರ್ಮಿಸಲಾಗುತ್ತಿದೆ.

ರಾಜ್ಯದ ಮೂಲೆ ಮೂಲೆಗಳಿಂದ ಸುಮಾರು 10 ಲಕ್ಷ ಸಂಖ್ಯೆಯ ಅಭಿಮಾನಿಗಳು ಆಗಮಿಸುವ ನಿರೀಕ್ಷೆ ಇದೆ. ಹಾಗಾಗಿ 2 ಲಕ್ಷ ಜನರಿಗೆ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಇಡೀ ಮೈದಾನಕ್ಕೆ ಧ್ವನಿ ಬೆಳಕಿನ ವ್ಯವಸ್ಥೆ ಮಾಡಲಾಗುತ್ತಿದೆ. ಇದಕ್ಕಾಗಿ ನೂರಾರು ಎಲ್‌ಇಡಿ ಪರದೆಗಳನ್ನು ಅಳವಡಿಸಲಾಗಿದೆ. ಬಿಸಿಲಿನ ಜಳದಿಂದ ಜನರಿಗೆ ರಕ್ಷಣೆ ನೀಡುವ ಉದ್ದೇಶದಿಂದ ಹೈದರಾಬಾದ್‌ನಿಂದ ನೂತನ ತಂತ್ರಜ್ಞಾನದ ಫ್ಯಾನ್‌ಗಳನ್ನು ತರಿಸಲಾಗುತ್ತಿದೆ. ಕಾರ್ಯಕ್ರಮದಲ್ಲಿ ಭಾಗವಹಿಸುವ ಜನರಿಗೆ ಅವರು ಕುಳಿತಿರುವ ಕಡೆಗೆ ಕುಡಿಯುವ ನೀರು, ಮಜ್ಜಿಗೆ ಪ್ಯಾಕೇಟ್‌ಗಳನ್ನು ವಿತರಿಸುವ ವ್ಯವಸ್ಥೆ ಮಾಡಲಾಗಿದೆ. ಬನ್, ಬಾಳೆಹಣ್ಣು ನೀಡಲಾಗುವುದು. ಇದಕ್ಕಾಗಿ ಹಲವು ಪ್ರಬಂಧಕರನ್ನು ನೇಮಿಸಲಾಗಿದೆ.

ಬಿಜೆಪಿ ರಾಜ್ಯ ಕಾರ್ಯದರ್ಶಿ ತಮ್ಮೇಶ್‌ಗೌಡ ವೇದಿಕೆ ನಿರ್ಮಾಣದ ಜವಾಬ್ಧಾರಿ ಹೊತ್ತಿದ್ದಾರೆ. ಬೆಂಗಳೂರಿನ ರಾಜಾ ಎಂಟರ್‌ಪ್ರೈಸಸ್ ಎಂಬ ಕಂಪನಿಗೆ ವೇದಿಕೆ ನಿರ್ಮಾಣ ಕಾಮಗಾರಿ ವಹಿಸಲಾಗಿದೆ. ಬೆಂಗಳೂರಿನ ಅರಮನೆ ಮೈದಾನ ಸೇರಿದಂತೆ ಬೆಂಗಳೂರಿನ ವಿವಿಧೆಡೆಗಳಲ್ಲಿ ನಡೆಯುವ ಬಹುತೇಕ ಕಾರ್ಯಕ್ರಮಗಳಿಗೆ ಕೆಲಸ ಮಾಡಿದ ಅನುಭವ ಈ ಕಂಪೆನಿಯದ್ದು. ಹಾಗಾಗಿ ಬಿಎಸ್‌ವೈ ಅಭಿಮಾನೋತ್ಸವ ಕಾರ್ಯಕ್ರಮದ ಸಿದ್ಧತೆಗಾಗಿ ನೂರಾರು ಸಂಖ್ಯೆಯ ಕಾರ್ಮಿಕರು ಹಗಲಿರುಳು ಶ್ರಮವಹಿಸಿ ಕೆಲಸ ಮಾಡುತ್ತಿದ್ದಾರೆ.

ಸುಮಾರು 8-10 ಕ್ರೇನ್‌ಗಳು, ಜೆಸಿಬಿ ಯಂತ್ರಗಳು, ಲಾರಿಗಳು ಸೇರಿದಂತೆ ನೂರಾರು ಸಂಖ್ಯೆಯ ವಾಹನಗಳು ವೇದಿಕೆ ನಿರ್ಮಾಣಕ್ಕೆ ಬೇಕಾದ ಪರಿಕರಗಳನ್ನು ಒದಗಿಸುವ ಕೆಲಸ ಮಾಡುತ್ತಿವೆ. ಒಂದಷ್ಟು ಟ್ರಾಕ್ಟರ್, ಲಾರಿ ಸೇರಿದಂತೆ ನೀರನ ಟ್ಯಾಂಕರ್‌ಗಳು ಮೈದಾನವನ್ನು ಸಮತಟ್ಟು ಮಾಡುತ್ತಿವೆ. ಮತ್ತೆ ಕೆಲವು ನೀರು ಹಾಕಿ ಸ್ವಚ್ಛಗೊಳಿಸುತ್ತಿವೆ. ಸಮಯದ ಅಭಾವ ಇರುವ ಕಾರಣ ಕಾರ್ಮಿಕರು ರಾತ್ರಿ ವಿದ್ಯುತ್ ದೀಪಗಳ ವ್ಯವಸ್ಥೆ ಮಾಡಿಕೊಂಡು ತ್ವರಿತವಾಗಿ ಕೆಲಸ ಮುಗಿಸುತ್ತಿದ್ದಾರೆ.

ಕಾರ್ಯಕ್ರಮಕ್ಕೆ ಬರುವ ಜನರಿಗೆ ಕಾರ್ಯಕ್ರಮದ ವೇದಿಕೆ ಇಕ್ಕೆಲಗಳಲ್ಲಿ 25 ಕಡೆಗಳಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ. ಇವುಗಳಲ್ಲಿ ಸುಮಾರು ಒಂದು ಸಾವಿರದಷ್ಟು ಊಟದ ಕೌಟರ್‌ಗಳನ್ನು ತೆರೆಯಲಾಗಿದೆ. ಕಾರ್ಯಕ್ರಮ ನಿರ್ವಹಣೆಗೆ 22 ಸಮಿತಿಗಳನ್ನು ರಚಿಸಲಾಗಿದೆ. ಇವುಗಳಲ್ಲಿ ಸುಮಾರು 2000 ಸಂಖ್ಯೆಯ ಪ್ರಬಂಧಕರು ಸ್ವಯಂ ಪ್ರೇರಣೆಯಿಂದ ಕೆಲಸ ಮಾಡುತ್ತಿದ್ದಾರೆ. ಊಟ, ಪಾರ್ಕಿಂಗ್, ಬರುವ ಜನರಿಗೆ ಅಗತ್ಯ ಸೌಕರ್ಯ ಒದಗಿಸುವುದು ಸೇರಿದಂತೆ ಪ್ರತಿಯೊಂದು ಸಮಿತಿಯು ತಮಗೆ ವಹಿಸಿದ ಜವಾಬ್ಧಾರಿಯನ್ನು ನಿರ್ವಹಿಸುತ್ತಿವೆ.

ಕಾರ್ಯಕ್ರಮಕ್ಕೆ ಕೇಂದ್ರ ಗೃಹಸಚಿವ ಅಮಿತ್ ಶಾ ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯಿಂದ ಸೂಕ್ತ ಭದ್ರತಾ ವ್ಯವಸ್ಥೆ ಮಾಡಿಕೊಳ್ಳಲಾಗಿದೆದಿಷ್ಟು ಮಾತ್ರವಲ್ಲದೇ ಅಭಿಮಾನೋತ್ಸವಕ್ಕೆ ಬರುವ ಯಾವೊಬ್ಬ ಅಭಿಮಾನಿಗೂ ಚಿಕ್ಕ ಜನರಿಗೆ ಯಾವುದೇ ತೊಂದರೆಯಾಗದಂತೆ ಎಚ್ಚರವಹಿಸಲಾಗುತ್ತಿದೆ. ಆರೋಗ್ಯದ ದೃಷ್ಠಿಯಿಂದ ಅಗತ್ಯ ವೈದ್ಯರ ತಂಡ ಕಾರ್ಯನಿರ್ವಹಿಸಲಿದೆ. ಅಲ್ಲದೇ ಅಗತ್ಯ ವಾಹನಗಳು ಹಾಗೂ ಔಷಧೋಪಕರಣಗಳ ವ್ಯವಸ್ಥೆ ಮಾಡಲಾಗಿದೆ.

ಬಿಎಸ್‌ವೈ ಅಭಿಮಾನಿಗಳು ಸ್ವಯಂ ಪ್ರೇರಣೆಯಿಂದ ವಾಹನಗಳ ವ್ಯವಸ್ಥೆ ಮಾಡುತ್ತಿದ್ದಾರೆ. ಸುಮಾರು 10 ರಿಂದ 12 ಸಾವಿರ ಬಸ್ಸುಗಳು, 80 ರಿಂದ 90 ಸಾವಿರ ಕಾರು, ವ್ಯಾನ್ ಮತ್ತಿತರ ವಾಹನಗಳು, ಸುಮಾರು 50 ರಿಂದ 60 ಸಾವಿರ ದ್ವಿಚಕ್ರ ವಾಹನಗಳು ಬರುವ ನಿರೀಕ್ಷೆಯಿದೆ. 200 ಕಡೆಗಳಲ್ಲಿ ಬ್ಯಾರಿಕೇಡ್ ವ್ಯವಸ್ಥೆ ಮಾಡಿದ್ದು, ಪಾರ್ಕಿಂಗ್ ಸಮಸ್ಯೆಯಾಗದಂತೆ ಸೂಕ್ತ ವ್ಯವಸ್ಥೆ ಮಾಡಲಾಗುತ್ತಿದೆ. ವೇದಿಕೆಯ ಸುತ್ತಮುತ್ತಲಿನ ಒಂದು ಕಿ.ಮೀ. ವ್ಯಾಪ್ತಿಯ ವಿವಿಧ ಸ್ಥಳಗಳಲ್ಲಿ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !