ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡು ಚುನಾವಣೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ವಿಜಯ್ ನೇತೃತ್ವದ ಟಿವಿಕೆ, ಈಗ ಸರ್ಕಾರ ರಚನೆಗೆ ಅಗತ್ಯ ಸಂಖ್ಯಾಬಲ ಒಗ್ಗೂಡಿಸುವ ಪ್ರಯತ್ನದಲ್ಲಿ ತೊಡಗಿದೆ. ಸ್ಪಷ್ಟ ಬಹುಮತ ಸಿಗದ ಹಿನ್ನೆಲೆಯಲ್ಲಿ ರಾಜಕೀಯ ಚಟುವಟಿಕೆಗಳು ವೇಗ ಪಡೆದುಕೊಂಡಿದ್ದು, ಮೈತ್ರಿ ರಾಜಕಾರಣಕ್ಕೆ ಹೊಸ ತಿರುವು ಸಿಕ್ಕಿದೆ.
ಈಗಾಗಲೇ ಕಾಂಗ್ರೆಸ್ ಬೆಂಬಲದೊಂದಿಗೆ ಮುನ್ನಡೆಯುತ್ತಿರುವ ಟಿವಿಕೆ, ಉಳಿದ ಸಂಖ್ಯಾಬಲಕ್ಕಾಗಿ ಎಡಪಕ್ಷಗಳತ್ತ ಮುಖ ಮಾಡಿದೆ. ಪಕ್ಷದ ಹಿರಿಯ ನಾಯಕರು ಕಮ್ಯುನಿಸ್ಟ್ ನಾಯಕರನ್ನು ಭೇಟಿ ಮಾಡಿ ಬೆಂಬಲ ಕೋರಿದ್ದು, ಸರ್ಕಾರ ರಚನೆಗೆ ಸಹಕಾರ ನೀಡುವಂತೆ ಮನವಿ ಮಾಡಿದ್ದಾರೆ. ನೇರ ಭೇಟಿಗಳ ಜೊತೆಗೆ ಅಧಿಕೃತ ಪತ್ರ ಹಾಗೂ ಇ-ಮೇಲ್ ಮುಖಾಂತರವೂ ಬೆಂಬಲದ ಕೋರಿಕೆ ಸಲ್ಲಿಸಲಾಗಿದೆ.
ಇದನ್ನೂ ಓದಿ:
ರಾಜ್ಯದ ಜನರು ವಿಜಯ್ ಅವರನ್ನು ಮುಖ್ಯಮಂತ್ರಿಯಾಗಿ ನೋಡಲು ಬಯಸಿದ್ದಾರೆ ಎಂಬ ವಿಶ್ವಾಸವನ್ನು ಟಿವಿಕೆ ನಾಯಕರು ವ್ಯಕ್ತಪಡಿಸಿದ್ದಾರೆ. ಚುನಾವಣಾ ಫಲಿತಾಂಶವೇ ಜನರ ಆಶಯವನ್ನು ಸ್ಪಷ್ಟಪಡಿಸಿದೆ ಎಂದು ಹೇಳಿರುವ ಅವರು, ರಾಜ್ಯಪಾಲರು ಅತಿದೊಡ್ಡ ಪಕ್ಷವಾಗಿರುವ ಟಿವಿಕೆಗೆ ಸರ್ಕಾರ ರಚಿಸಲು ಅವಕಾಶ ನೀಡುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದಾರೆ.
ಇದೀಗ ಎಡಪಕ್ಷಗಳ ನಿರ್ಧಾರವೇ ತಮಿಳುನಾಡಿನ ಮುಂದಿನ ರಾಜಕೀಯ ದಿಕ್ಕನ್ನು ನಿರ್ಧರಿಸುವಂತಾಗಿದೆ. ಬೆಂಬಲ ಸಿಕ್ಕರೆ ವಿಜಯ್ ನೇತೃತ್ವದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರಬಹುದು; ಇಲ್ಲವಾದರೆ ರಾಜ್ಯ ರಾಜಕೀಯದಲ್ಲಿ ಮತ್ತಷ್ಟು ಅನಿಶ್ಚಿತತೆ ಮುಂದುವರಿಯುವ ಸಾಧ್ಯತೆ ಇದೆ.



