ಹೊಸದಿಗಂತ ವರದಿ, ಚಿತ್ರದುರ್ಗ:
ಚಿತ್ರದುರ್ಗದಲ್ಲಿ ಮೇ 09 ರಂದು ನಡೆಯುವ ಬಿಎಸ್‌ವೈ ಅಭಿಮಾನೋತ್ಸವದ ಹಿನ್ನೆಲೆಯಲ್ಲಿ ಮೇ 08 ರಂದು ಬಿಎಸ್‌ವೈ ಪುರಪ್ರವೇಶ ಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭದಲ್ಲಿ ವಿವಿಧ ಕಲಾತಂಡಗಳು ಭಾಗವಹಿಸಲಿದ್ದು ಮೈಸೂರು ದಸರಾ ಜಂಬೂ ಸವಾರಿ ಮಾದರಿಯಲ್ಲಿ ಮೆರವಣಿಗೆ ನಡೆಸಲಾಗುವುದು ಎಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚ ರಾಜ್ಯಾಧ್ಯಕ್ಷ ರಘು ಕೌಟಿಲ್ಯ ತಿಳಿಸಿದರು.
ನಗರದ ಹೊರವಲಯದ ಎಸ್‌ಜೆಎಂ ಕಾಲೇಜು ಆವರಣದಲ್ಲಿ ಮೆರವಣಿಗೆಗೆ ಸಿದ್ಧಪಡಿಸುತ್ತಿರುವ ಟ್ಯಾಬ್ಲೋಗಳನ್ನು ಪರಿಶೀಲಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ 50 ವರ್ಷಗಳ ರಾಜಕೀಯ ಜೀವನ ಹಿನ್ನೆಲೆಯಲ್ಲಿ ನಗರದ ಹೊರ ವಲಯದಲ್ಲಿ ಹಮ್ಮಿಕೊಂಡಿರುವ ಬಿಎಸ್‌ವೈ ಅಭಿಮಾನೋತ್ಸವ ಹಬ್ಬದ ರೀತಿಯಲ್ಲಿ ಆಚರಿಸಬೇಕು. ಈ ಹಿನ್ನೆಲೆಯಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದರು.
ಮೇ 08 ರಂದು ಸಂಜೆ ೫ ಗಂಟೆಯಿಂದ ಪುರಪ್ರವೇಶ ಕಾರ್ಯಕ್ರಮ ಆರಂಭವಾಗುವುದು. ಹೊಳಲ್ಕೆರೆ ರಸ್ತೆಯ ಕನಕ ವೃತ್ತದಲ್ಲಿ ಬಿ.ಎಸ್.ಯಡಿಯೂರಪ್ಪ ಅವರನ್ನು ಪೂರ್ಣಕುಂಭದೊಂದಿಗೆ ಅದ್ದೂರಿ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಗುವುದು. ಪೂರ್ಣಕುಂಭ ಹೊತ್ತ ಒಂದು ಸಾವಿರ ಮಹಿಳೆಯರು ಸಮವಸ್ತ್ರದೊಂದಿಗೆ ಭಾಗವಹಿಸುವರು. ನೂರಾರು ಸಂಖ್ಯೆಯ ರೈತರು ಧಾನ್ಯಗಳ ರಾಶಿಯನ್ನು ಹಾಕಿ ಸ್ವಾಗತ ಕೋರಲಿದ್ದಾರೆ. ಅಲ್ಲಿಂದ ಮೆರವಣಿಗೆ ನಡೆಸಲಾಗುವುದು ಎಂದು ಹೇಳಿದರು.
ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳು, ಸ್ಥಬ್ದಚಿತ್ರಗಳು ಭಾಗವಹಿಸಲಿವೆ. ಮೆರವಣಿಗೆಗಾಗಿ ಒಟ್ಟು ಆರು ಸ್ಥಬ್ದ ಚಿತ್ರಗಳನ್ನು ಸಿದ್ಧಪಡಿಸಲಾಗಿದೆ. ಅವುಗಳು ಬಿ.ಎಸ್.ಯಡಿಯೂರಪ್ಪನವರ ಬಾಲ್ಯ, ರಾಜಕೀಯ ಜೀವನ, ಅವರ ಸಂಕಷ್ಟದ ಸ್ಥಿತಿ ಅಭಿವ್ಯಕಗೊಳಿಸುತ್ತವೆ. ಬಿಎಸ್‌ವೈ ಸರ್ಕಾರದಲ್ಲಿ ಆಗಿರುವ ಅಭಿವೃದ್ದಿ ಕೆಲಸಗಳ ಕುರಿತು ಮಾಹಿತಿ ನೀಡಲಾಗುವುದು. ಕೆಲವು ಯೋಜನೆಗಳ ಕುರಿತು ಕಲಾವಿದರು ಅಣುಕು ಪ್ರದರ್ಶನ ಮಾಡಿ ಜನರಿಗೆ ಮಾಹಿತಿ ನೀಡಲಿದ್ದಾರೆ ಎಂದು ತಿಳಿಸಿದರು.
ಅದರಂತೆ ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದಾಗ ಹತ್ತು ಹಲವು ಜನಪ್ರಿಯ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ರೈತರಿಗಾಗಿ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಿದರು. ಹೆಣ್ಣು ಹುಟ್ಟಿದರೆ ಹೆತ್ತವರು ಚಿಂತೆ ಮಾಡಬಾರದೆಂಬ ಕಾರಣಕ್ಕೆ ’ಭಾಗ್ಯಲಕ್ಷ್ಮಿ ಯೋಜನೆ’ ಜಾರಿ ಮಾಡಿದರು. ಗ್ರಾಮೀಣ ಭಾಗದಲ್ಲಿ ಶಾಲೆಗಳಿಗೆ ಹೋಗುವ ಹೆಣ್ಣುಮಕ್ಕಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಉಚಿತ ಬೈಸಿಕಲ್ ವಿತರಣೆ ಮಾಡಿದರು. ಇಂತಹ ಹತ್ತು ಹಲವು ಜನಪರ ಯೋಜನೆಗಳನ್ನು ಬಿ.ಎಸ್.ಯಡಿಯೂರಪ್ಪ ಜಾರಿ ಮಾಡಿದ್ದಾರೆ ಎಂದರು.
ಇಂತಹ ಹತ್ತು ಹಲವು ಯೋಜನೆಗಳು, ಅವರ ಹೋರಾಟದ ಬದುಕು ಸೇರಿದಂತೆ ಎಲ್ಲ ಮಾಹಿತಿಗಳನ್ನು ದೊಡ್ಡ ಮಟ್ಟದಲ್ಲಿ ಎಲ್‌ಇಡಿ ಪರದೆಯಲ್ಲಿ ಬಿತ್ತಿರಿಸುವ ಮೂಲಕ ರಾಜ್ಯದ ಜನರಿಗೆ ಅವರ ಜೀವನ ದರುಶನ ಮಾಡಿಸಲಾಗುವುದು. ಇಂತಹ ಪ್ರಯತ್ನ ರಾಜ್ಯದಲ್ಲಿ ಹಿಂದೆಂದೂ ನಡೆದಿಲ್ಲ. ಇದು ರಾಜ್ಯದಲ್ಲೇ ಮೊದಲು. ನಾಡಿನ ವಿವಿಧ ಭಾಗಗಳಿಂದ ಲಕ್ಷಾಂತರ ಅಭಿಮಾನಿಗಳು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಹೀಗೆ ಬರುವ ಜನರಿಗೆ ಸಾರಿಗೆ ಸೇರಿದಂತೆ ಊಟ, ಕುಡಿಯುವ ನೀರು ಸೇರಿದಂತೆ ಅಗತ್ಯ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ಪುರಪ್ರವೇಶದ ಮೆರವಣಿಗೆಯಲ್ಲಿ ನಾರಿಶಕ್ತಿ ವಂದನ್‌ಗೆ ಸಂಬಂಧಿಸಿದಂತೆ ಒನಕೆ ಓಬವ್ವ ರೀತಿಯಲ್ಲಿ ಉಡುಗೆ ಧರಿಸಿ ಕೈಯಲ್ಲಿ ಒನಕೆ ಹಿಡಿದು ಸುಮಾರು 200 ಮಹಿಳೆಯರು ಭಾಗವಹಿಸುವರು. 500ಕ್ಕೂ ಹೆಚ್ಚು ರೈತರು ನೇಗಿಲು ಹೊತ್ತ ರೈತನ ರೀತಿಯಲ್ಲಿ ನೇಗಿಲು ಹೊತ್ತು ಮೆರವಣಿಗೆಯಲ್ಲಿ ಭಾಗವಹಿಸುವರು. ವಿವಿಧ ಜಾನಪದ ಕಲಾತಂಡಗಳು ಸೇರಿದಂತೆ ಅಪಾರ ಸಂಖ್ಯೆಯ ಜನರು, ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಓಬಿಸಿ ಮೋರ್ಚ ಉಪಾಧ್ಯಕ್ಷ ವೆಂಕಟೇಶ್, ಬಿಜೆಪಿ ಕಾರ್ಯದರ್ಶಿ ಸಂಪತ್‌ಕುಮಾರ್, ಕೂಡಾ ಮಾಜಿ ಅಧ್ಯಕ್ಷ ಜಿ.ಟಿ.ಸುರೇಶ್, ಅಶ್ವಿನಿ, ಬಸವರಾಜ್, ಶ್ಯಾಮಲಾ ಶಿವಪ್ರಕಾಶ್, ಕವನ ರಾಘವೇಂದ್ರ, ಶೈಲಜಾರೆಡ್ಡಿ, ರಜನಿ ಹಾಜರಿದ್ದರು.



