May 7, 2026
Thursday, May 7, 2026
spot_img

18 ಮಂದಿ ರೌಡಿಶೀಟರ್‌ಗಳಿಗೆ ಗಡಿಪಾರು ಆದೇಶ: ಎಸ್‌ಪಿ ಕೆ. ರಾಮರಾಜನ್

ಹೊಸದಿಗಂತ ವರದಿ ಬೆಳಗಾವಿ:

ಕೊಲೆಗೆ ಯತ್ನ, ಮಟ್ಕಾ, ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚೋದನಕಾರಿ ವಿಡಿಯೋ ಮತ್ತು ರೀಲ್ಸ್‌ ಹರಿಬಿಡುವುದು ಸೇರಿದಂತೆ ವಿವಿಧ ಅಪರಾಧಿಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ 18 ಮಂದಿ ರೌಡಿಶೀಟರ್‌ಗಳನ್ನು ಕಳೆದ ಒಂದೂವರೆ ತಿಂಗಳಲ್ಲಿ ಬೆಳಗಾವಿ ಜಿಲ್ಲೆಯಿಂದ ಗಡಿಪಾರು ಮಾಡಿ ಆದೇಶ ಹೊರಡಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ತಿಳಿಸಿದ್ದಾರೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೋಕಾಕ ತಾಲ್ಲೂಕಿನ ಗಂಗಪ್ಪ ನಾಯಿಕ, ಸಂಜು ಮೇಸ್ತ್ರಿ, ಸಾಗರ ಖಾನಾಪುರ ಹಾಗೂ ಪಾಸ್ಕಲ್ ಮುತ್ತುಸ್ವಾಮಿ ಅವರನ್ನು ಆರು ತಿಂಗಳು ಗಡಿಪಾರು ಮಾಡಲಾಗಿದೆ ಎಂದು ತಿಳಿಸಿದರು.

ಕುಲಗೋಡ ಠಾಣೆ ವ್ಯಾಪ್ತಿಯ ದಸ್ತಗೀರಸಾಬ್ ನವಲಗಿ ಎಂಬಾತನಿಗೆ ಎಂಟು ತಿಂಗಳು, ಮುರಗೋಡ ಠಾಣೆ ವ್ಯಾಪ್ತಿಯ ಹನುಮಂತ ಮಾದರ ಎಂಬಾತನಿಗೆ ಒಂದು ವರ್ಷ ಹಾಗೂ ನೀಲಕಂಠ ಮಣವಾಡಕರ ಎಂಬಾತನಿಗೆ ಆರು ತಿಂಗಳ ಗಡಿಪಾರು ಆದೇಶ ನೀಡಲಾಗಿದೆ ಎಂದರು.

ನಿಪ್ಪಾಣಿ ತಾಲ್ಲೂಕಿನ ಸೈಫ್‌ಅಲಿ ನಾಗರ್ಜಿ, ಪ್ರವೀಣ ಚೌಗಲೆ ಹಾಗೂ ಚಂದ್ರಕಾಂತ ವಡ್ಡರ ಅವರನ್ನು ಒಂದು ವರ್ಷ, ಸಂಕೇಶ್ವರದ ಸಚಿನ ಚೌಡಕ್ಕನವರ ಎಂಬಾತನನ್ನು ಒಂದು ವರ್ಷ ಗಡಿಪಾರು ಮಾಡಲಾಗಿದೆ. ಯಮಕನಮರಡಿ ಠಾಣೆ ವ್ಯಾಪ್ತಿಯ ಲಾಡಜಿಸಾಬ್ ಮುಲ್ತಾನಿ ಹಾಗೂ ಪಾರೇಶ ನಾಶಿಪುಡಿ ಅವರಿಗೆ ಎಂಟು ತಿಂಗಳು, ಚನ್ನಮ್ಮನ ಕಿತ್ತೂರಿನ ದೀಪಕ ಕೆಳಗಡೆಗೆ ಆರು ತಿಂಗಳು, ಕುಮಾರ ಬೆಂಡಿಗೇರಿಗೆ ಏಳು ತಿಂಗಳು, ಕಟಕೋಳದ ಚೇತನ ನಾಯ್ಕರಗೆ ಮೂರು ತಿಂಗಳು, ಸವದತ್ತಿಯ ಹುಸೇನಸಾಬ್ ಬೀಳಗಿಗೆ ಎರಡು ತಿಂಗಳು ಹಾಗೂ ಸುರೇಬಾನದ ಚುರಚಪ್ಪ ಘಟ್ನೂರಗೆ ಒಂದು ತಿಂಗಳ ಗಡಿಪಾರು ಆದೇಶ ಹೊರಡಿಸಲಾಗಿದೆ ಎಂದು ವಿವರಿಸಿದರು.

ಇದನ್ನೂ ಓದಿ:

“ಅವರ ಅಪರಾಧಿಕ ಹಿನ್ನೆಲೆ ಹಾಗೂ ಸಮಾಜದಲ್ಲಿ ಶಾಂತಿ ಕದಡುವ ಚಟುವಟಿಕೆಗಳನ್ನು ಪರಿಗಣಿಸಿ, ಅಪರಾಧಗಳನ್ನು ತಡೆಗಟ್ಟುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ” ಎಂದು ಕೆ. ರಾಮರಾಜನ್ ಹೇಳಿದರು.

“‘ಬ್ಯಾಡ್ ಬಾಯ್ಸ್’, ‘ಟಗರು ಬಾಯ್ಸ್’, ‘ಕಿಂಗ್‌ಮೇಕರ್’ ಹೀಗೆ ನಾನಾ ಹೆಸರಿನಲ್ಲಿ ರೌಡಿಶೀಟರ್‌ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಖಾತೆ ತೆರೆದು ವಿಡಿಯೋ ಹಾಗೂ ರೀಲ್ಸ್‌ ಹರಿಬಿಡುತ್ತಿದ್ದರು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು, ಇಂಥ ಚಟುವಟಿಕೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ” ಎಂದರು.

“ಸಮಾಜದಲ್ಲಿ ಭಯದ ವಾತಾವರಣ ನಿರ್ಮಿಸಲು ಮತ್ತು ತಮ್ಮ ಪ್ರಭಾವ ಬೆಳೆಸಿಕೊಳ್ಳಲು ಕೆಲವರು ಸಾಮಾಜಿಕ ಮಾಧ್ಯಮಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ತಲ್ವಾರ್ ಹಿಡಿದು ಓಡಾಡುವುದು, ಮಾರಕಾಸ್ತ್ರಗಳಿಂದ ಕೇಕ್ ಕತ್ತರಿಸುವುದು ಸೇರಿದಂತೆ ರೌಡಿಸಂ ಪ್ರದರ್ಶಿಸುವ ವಿಡಿಯೋಗಳು ಮಕ್ಕಳು ಮತ್ತು ಯುವಜನರನ್ನು ತಪ್ಪು ದಾರಿಗೆ ಎಳೆಯುತ್ತಿವೆ. ಇದು ಆತಂಕಕಾರಿ ಬೆಳವಣಿಗೆ” ಎಂದು ಹೇಳಿದರು.

“ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿ. ಮಕ್ಕಳನ್ನು ಬಳಸಿಕೊಂಡು ರೌಡಿಸಂ ಪ್ರದರ್ಶಿಸಿದರೆ ಸಹಿಸುವುದಿಲ್ಲ. ಇಡೀ ಜಿಲ್ಲೆಯ ಸಾಮಾಜಿಕ ಮಾಧ್ಯಮಗಳ ಮೇಲೆ ನಿಗಾ ಇರಿಸಿದ್ದೇವೆ. ಪ್ರಚೋದನಕಾರಿ ವಿಡಿಯೋ ಅಥವಾ ರೀಲ್ಸ್‌ಗಳನ್ನು ತಕ್ಷಣವೇ ತೆಗೆದುಹಾಕಬೇಕು. ಇಲ್ಲವಾದರೆ ಕಠಿಣ ಕಾನೂನು ಕ್ರಮ ಎದುರಿಸಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !