May 8, 2026
Friday, May 8, 2026
spot_img

ತಮಿಳುನಾಡಿನಲ್ಲಿ ‘ಸರ್ಕಾರ್’ ಸೀನ್ ರಿಪೀಟ್: ದಳಪತಿ ವಿಜಯ್ ಸಿಎಂ ಪಟ್ಟಕ್ಕೆ ಎದುರಾಳಿಗಳ ಚೆಕ್-ಮೇಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶವು ಇಡೀ ದೇಶದ ಗಮನ ಸೆಳೆದಿದೆ. ದ್ರಾವಿಡ ಪಕ್ಷಗಳ ಭದ್ರಕೋಟೆಯಲ್ಲಿ ನಟ ದಳಪತಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಮ್ ಪಕ್ಷವು 108 ಸ್ಥಾನಗಳನ್ನು ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ. ಆದರೆ, ಈ ಭರ್ಜರಿ ಗೆಲುವಿನ ನಡುವೆಯೂ ವಿಜಯ್ ಮುಖ್ಯಮಂತ್ರಿಯಾಗುವ ಹಾದಿ ಅಷ್ಟು ಸುಲಭವಿಲ್ಲ ಎಂಬುದು ಈಗ ಸಾಬೀತಾಗುತ್ತಿದೆ.

ವಿಜಯ್ ನಟನೆಯ 2018ರ ಸೂಪರ್ ಹಿಟ್ ಸಿನಿಮಾ ‘ಸರ್ಕಾರ್’ ನೆನಪಿದೆಯೇ? ಆ ಚಿತ್ರದಲ್ಲಿ ನಾಯಕ ಮುಖ್ಯಮಂತ್ರಿಯಾಗುವುದನ್ನು ತಡೆಯಲು ರಾಜಕೀಯ ಶಕ್ತಿಗಳು ಒಂದಾಗುತ್ತವೆ. ಈಗ ತಮಿಳುನಾಡು ರಾಜಕೀಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಕೂಡ ಅಚ್ಚರಿ ಎಂಬಂತೆ ಅದೇ ಚಿತ್ರದ ದೃಶ್ಯಗಳನ್ನು ನೆನಪಿಸುತ್ತಿವೆ. ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು “ಒಂದು ಚಿತ್ರ ವಾಸ್ತವಕ್ಕೆ ತಿರುಗಿದಾಗ ಹೀಗಿರುತ್ತದೆ” ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಬುಧವಾರ ದಳಪತಿ ವಿಜಯ್ ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚನೆಯ ಹಕ್ಕು ಮಂಡಿಸಿದರು. 234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಯಲ್ಲಿ ಮ್ಯಾಜಿಕ್ ನಂಬರ್ 118. ವಿಜಯ್ ಅವರ ಟಿವಿಕೆ ಪಕ್ಷ 108 ಸ್ಥಾನಗಳನ್ನು ಗೆದ್ದಿದ್ದು, ಕಾಂಗ್ರೆಸ್‌ನ ಬೆಂಬಲದೊಂದಿಗೆ ಈ ಸಂಖ್ಯೆ 113ಕ್ಕೆ ಏರಿಕೆಯಾಗಿದೆ. ಆದರೂ, ಬಹುಮತಕ್ಕೆ ಇನ್ನೂ 5 ಸ್ಥಾನಗಳ ಕೊರತೆಯಿದೆ. ಪೂರ್ಣ ಪ್ರಮಾಣದ 118 ಶಾಸಕರ ಬೆಂಬಲ ಪತ್ರ ನೀಡುವಂತೆ ರಾಜ್ಯಪಾಲರು ಸೂಚಿಸಿರುವುದು ವಿಜಯ್‌ಗೆ ಅಗ್ನಿಪರೀಕ್ಷೆಯಂತಾಗಿದೆ.

ಇನ್ನೊಂದೆಡೆ, ದಶಕಗಳ ಕಾಲ ಪರಸ್ಪರ ವೈರಿಗಳಾಗಿದ್ದ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳು, ವಿಜಯ್ ಅವರನ್ನು ಅಧಿಕಾರದಿಂದ ದೂರ ಇಡಲು ಮೈತ್ರಿ ಮಾಡಿಕೊಳ್ಳಲಿವೆ ಎಂಬ ವದಂತಿಗಳು ಕಾಡ್ಗಿಚ್ಚಿನಂತೆ ಹಬ್ಬಿವೆ. ಈ ಎರಡು ಪ್ರಮುಖ ಪಕ್ಷಗಳು ಕೈಜೋಡಿಸಿದರೆ ತಮಿಳುನಾಡು ರಾಜಕೀಯ ಇತಿಹಾಸದಲ್ಲೇ ಇದು ದೊಡ್ಡ ತಿರುವು ಎನಿಸಿಕೊಳ್ಳಲಿದೆ.

ಒಟ್ಟಿನಲ್ಲಿ, ಸಿನಿಮಾದ ತೆರೆಯ ಮೇಲೆ ಅಡೆತಡೆಗಳನ್ನು ಮೆಟ್ಟಿ ನಿಂತು ಗೆಲ್ಲುವ ದಳಪತಿ ವಿಜಯ್, ನಿಜ ಜೀವನದ ಈ ರಾಜಕೀಯ ವ್ಯೂಹವನ್ನು ಹೇಗೆ ಭೇದಿಸುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಮನೆಮಾಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !