ಹೊಸದಿಗಂತ ಡಿಜಿಟಲ್ ಡೆಸ್ಕ್:
“ಕಸವೇ ಇಂಧನವಾಗಲಿದೆ” ಎಂಬ ಹೊಸ ಪರಿಕಲ್ಪನೆಯನ್ನು ಮುಂದಿಟ್ಟಿರುವ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ದೆಹಲಿಯ ಸಾರ್ವಜನಿಕ ಬಸ್‌ಗಳನ್ನು ಘನತ್ಯಾಜ್ಯದಿಂದ ತಯಾರಾಗುವ ಹಸಿರು ಹೈಡ್ರೋಜನ್ ಇಂಧನದಲ್ಲಿ ಓಡಿಸುವ ಯೋಜನೆಯನ್ನು ಘೋಷಿಸಿದ್ದಾರೆ. ಈ ಯೋಜನೆಯಿಂದ ಕಸದ ಸಮಸ್ಯೆ, ಮಾಲಿನ್ಯ ಹಾಗೂ ಇಂಧನ ಆಮದು ವೆಚ್ಚಕ್ಕೆ ಒಂದೇ ಪರಿಹಾರ ಸಿಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಸವೇ ಇಂಧನದ ಮೂಲ
ಬಿಜೆಪಿ ಯುವ ಸಮಾವೇಶದಲ್ಲಿ ಮಾತನಾಡಿದ ಗಡ್ಕರಿ, ನಗರಗಳಲ್ಲಿರುವ ಮುನ್ಸಿಪಲ್ ಕಸವನ್ನು ಜೈವಿಕ ಹಾಗೂ ಅಜೈವಿಕವಾಗಿ ಪ್ರತ್ಯೇಕಿಸಿ, ಬಯೋ-ಡೈಜೆಸ್ಟರ್ ತಂತ್ರಜ್ಞಾನದ ಮೂಲಕ ಹೈಡ್ರೋಜನ್ ಅನಿಲ ಉತ್ಪಾದಿಸಲಾಗುತ್ತದೆ ಎಂದು ವಿವರಿಸಿದರು. ಈ ಇಂಧನವನ್ನು ಸಾರ್ವಜನಿಕ ಬಸ್‌ಗಳಲ್ಲಿ ಬಳಸುವ ಮೂಲಕ ಕಸದ ಸಮಸ್ಯೆ ಮತ್ತು ಇಂಧನದ ಅವಶ್ಯಕತೆ ಎರಡಕ್ಕೂ ಪರಿಹಾರ ಸಿಗಲಿದೆ ಎಂದರು.
ಇದನ್ನೂ ಓದಿ:
‘ನಾನು ಹೇಳಿದ ಕೆಲಸ ಅರ್ಧದಲ್ಲೇ ನಿಂತಿಲ್ಲ’
ಕಸದಿಂದ ಬಸ್‌ಗಳನ್ನು ಓಡಿಸುವ ವಿಚಾರ ಹೇಳಿದಾಗ ಹಲವರು ನಗುತ್ತಾರೆ. ಆದರೆ, ಕಳೆದ ಹಲವು ದಶಕಗಳ ಸಾರ್ವಜನಿಕ ಜೀವನದಲ್ಲಿ ನಾನು ಘೋಷಿಸಿದ ಯಾವುದೇ ಯೋಜನೆ ಅನುಷ್ಠಾನಗೊಳ್ಳದೆ ಉಳಿದಿಲ್ಲ. ಸಮಗ್ರ ಅಧ್ಯಯನದ ಬಳಿಕವೇ ನಾನು ಯಾವುದೇ ಯೋಜನೆ ಘೋಷಿಸುತ್ತೇನೆ ಎಂದು ಗಡ್ಕರಿ ವಿಶ್ವಾಸ ವ್ಯಕ್ತಪಡಿಸಿದರು.
ಮಾಲಿನ್ಯ ಕಡಿಮೆ, ತೈಲ ಆಮದುಗೂ ಬ್ರೇಕ್
ಹೈಡ್ರೋಜನ್ ಚಾಲಿತ ಬಸ್‌ಗಳಿಂದ ನೀರಿನ ಆವಿಯಷ್ಟೇ ಹೊರಬರುವುದರಿಂದ ವಾಯುಮಾಲಿನ್ಯ ಗಣನೀಯವಾಗಿ ಕಡಿಮೆಯಾಗಲಿದೆ. ಜೊತೆಗೆ, ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅವಲಂಬನೆ ಇಳಿದು, ಕಚ್ಚಾತೈಲ ಆಮದು ವೆಚ್ಚವನ್ನು ಕೂಡ ಕಡಿಮೆ ಮಾಡಬಹುದು ಎಂದು ಸಚಿವರು ಹೇಳಿದರು.



