ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂಡಿಯನ್ ಪ್ರೀಮಿಯರ್ ಲೀಗ್ 2026ರ ಸೀಸನ್‌ನಲ್ಲಿ ಗುರುವಾರ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ರೋಚಕ ಜಯ ದಾಖಲಿಸಿದೆ. ಪ್ಲೇಆಫ್ ರೇಸ್‌ನಲ್ಲಿ ಜೀವಂತವಾಗಿರಲು ಲಕ್ನೋಗೆ ಈ ಗೆಲುವು ಅನಿವಾರ್ಯವಾಗಿತ್ತು. ಕೇವಲ ಆಟದಲ್ಲಿ ಮಾತ್ರವಲ್ಲದೆ, ಮೈದಾನದಲ್ಲಿ ಆಟಗಾರರ ನಡುವಿನ ವಾಗ್ವಾದದಿಂದಲೂ ಈ ಪಂದ್ಯ ಸದ್ಯ ಭಾರೀ ಸುದ್ದಿಯಲ್ಲಿದೆ.
ಪಂದ್ಯದ ಬಿಸಿಯ ನಡುವೆ ಆರ್‌ಸಿಬಿ ಆಲ್‌ರೌಂಡರ್ ಕೃನಾಲ್ ಪಾಂಡ್ಯ ಮತ್ತು ಲಕ್ನೋ ಬ್ಯಾಟರ್ ನಿಕೋಲಸ್ ಪೂರನ್ ನಡುವೆ ಮಾತಿನ ಚಕಮಕಿ ನಡೆಯಿತು. ಲಕ್ನೋ ಪರ ಅರ್ಶಿನ್ ಕುಲಕರ್ಣಿ ಅವರನ್ನು ಔಟ್ ಮಾಡಿದ ನಂತರ ಕೃನಾಲ್ ಪಾಂಡ್ಯ ಅಬ್ಬರಿಸಿದ್ದರು. ಆ ಸಮಯದಲ್ಲಿ ಕ್ರೀಸ್‌ಗೆ ಬಂದ ನಿಕೋಲಸ್ ಪೂರನ್ ಅವರನ್ನು ಕೃನಾಲ್ ತೀಕ್ಷ್ಣವಾದ ಬೌನ್ಸರ್ ಮೂಲಕ ಸ್ವಾಗತಿಸಿದರು. ಸುಮಾರು 119 ಕಿ.ಮೀ ವೇಗದಲ್ಲಿ ಬಂದ ಈ ಎಸೆತ ಪೂರನ್ ಅವರನ್ನು ಅಚ್ಚರಿಗೊಳಿಸಿತು.
ಮುಂದಿನ ಎಸೆತದಲ್ಲಿ ಮತ್ತೊಂದು ಶಾರ್ಟ್ ಬಾಲ್ ಎಸೆದ ಕೃನಾಲ್ ವಿರುದ್ಧ ಪೂರನ್ ರನ್ ಗಳಿಸಿದರು. ಈ ವೇಳೆ ರನ್ ಪೂರ್ಣಗೊಳಿಸಿದ ಪೂರನ್, ಕೃನಾಲ್ ಬಳಿ ಬಂದು ಏನೋ ಹೇಳುತ್ತಿದ್ದಂತೆ ಇಬ್ಬರ ನಡುವೆ ಜಗಳ ಶುರುವಾಯಿತು. ಕೆಲ ಸೆಕೆಂಡುಗಳ ಕಾಲ ಪರಸ್ಪರ ಎದುರು ನಿಂತು ಕಿಡಿಕಾರಿದ ಇಬ್ಬರನ್ನೂ ನೋಡಿ ಮೈದಾನದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಆದರೆ, ಕೂಡಲೇ ಪರಿಸ್ಥಿತಿ ತಣ್ಣಗಾಗಿ ಆಟ ಮುಂದುವರಿಯಿತು. ಈ ಘಟನೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ರಿಷಭ್ ಪಂತ್ ನೇತೃತ್ವದ ಲಕ್ನೋ ತಂಡ ಸತತ ಆರು ಪಂದ್ಯಗಳ ಸೋಲಿನ ಸುಳಿಯಿಂದ ಹೊರಬಂದು ಈಗ ಹ್ಯಾಟ್ರಿಕ್ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ ತಂಡದ ಪ್ಲೇಆಫ್ ಆಸೆ ಇನ್ನೂ ಜೀವಂತವಾಗಿದೆ. ಆದರೆ, ಲಕ್ನೋ ಹಾದಿ ಅಷ್ಟು ಸುಲಭವಿಲ್ಲ. ಮುಂಬರುವ ಎಲ್ಲಾ ಪಂದ್ಯಗಳನ್ನು ಗೆಲ್ಲುವುದರ ಜೊತೆಗೆ, ಇತರ ತಂಡಗಳ ಸೋಲು-ಗೆಲುವಿನ ಲೆಕ್ಕಾಚಾರದ ಮೇಲೆ ಲಕ್ನೋದ ಭವಿಷ್ಯ ಅಡಗಿದೆ.



