May 8, 2026
Friday, May 8, 2026
spot_img

ಬಜೆಟ್ ಇರೋದೇ 3 ಲಕ್ಷ ಕೋಟಿ, ವಿಜಯ್ ಯೋಜನೆಗೆ ಬೇಕು 7 ಲಕ್ಷ ಕೋಟಿ! ಹೆಚ್‌ಡಿಕೆ ವ್ಯಂಗ್ಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮಿಳುನಾಡು ರಾಜಕೀಯದಲ್ಲಿ ಸಂಚಲನ ಮೂಡಿಸುತ್ತಿರುವ ನಟ ವಿಜಯ್ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ ಪಕ್ಷದ ಉಚಿತ ಗ್ಯಾರಂಟಿ ಘೋಷಣೆಗಳ ಬಗ್ಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ವಿಜಯ್ ಅವರ ಉಚಿತ ಕೊಡುಗೆಗಳ ಭರವಸೆಯು ಪ್ರಾಯೋಗಿಕವಾಗಿ ಅಸಾಧ್ಯ ಎಂಬರ್ಥದಲ್ಲಿ ಅವರು ಲೇವಡಿ ಮಾಡಿದ್ದಾರೆ.

ವಿಜಯ್ ಅವರು ಘೋಷಿಸಿರುವ ಯೋಜನೆಗಳ ಅನುಷ್ಠಾನಕ್ಕೆ ಬೃಹತ್ ಮೊತ್ತದ ಹಣದ ಅಗತ್ಯವಿದೆ ಎಂದು ಕುಮಾರಸ್ವಾಮಿ ವಿಶ್ಲೇಷಿಸಿದ್ದಾರೆ. “ತಮಿಳುನಾಡಿನ ವಾರ್ಷಿಕ ಬಜೆಟ್ ಸದ್ಯ ಸುಮಾರು 3.30 ರಿಂದ 3.40 ಲಕ್ಷ ಕೋಟಿ ರೂ. ವ್ಯಾಪ್ತಿಯಲ್ಲಿದೆ. ಆದರೆ, ವಿಜಯ್ ನೀಡಿರುವ ಉಚಿತ ಭರವಸೆಗಳನ್ನು ಈಡೇರಿಸಲು ವಾರ್ಷಿಕವಾಗಿ ಕನಿಷ್ಠ 6 ರಿಂದ 7 ಲಕ್ಷ ಕೋಟಿ ರೂ. ಬೇಕಾಗುತ್ತದೆ. ಇದು ರಾಜ್ಯದ ಒಟ್ಟು ಬಜೆಟ್‌ಗಿಂತಲೂ ದುಪ್ಪಟ್ಟು ಮೊತ್ತವಾಗಿದೆ” ಎಂದು ಅವರು ಅಂಕಿಅಂಶಗಳ ಸಮೇತ ವಿವರಿಸಿದರು.

ಇಷ್ಟೊಂದು ಬೃಹತ್ ಮೊತ್ತದ ಆರ್ಥಿಕ ಸಂಪನ್ಮೂಲವನ್ನು ವಿಜಯ್ ಅವರು ಎಲ್ಲಿಂದ ಮತ್ತು ಹೇಗೆ ಸಂಗ್ರಹಿಸುತ್ತಾರೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಈ ಅತಿರಂಜಿತ ಭರವಸೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಹೆಚ್‌ಡಿಕೆ, “ವಿಜಯ್ ಅವರ ಇಂತಹ ಸಾಹಸವನ್ನು ಆ ದೇವರೇ ಕಾಪಾಡಬೇಕು” ಎಂದು ವ್ಯಂಗ್ಯವಾಗಿ ನುಡಿದರು.

ಕರ್ನಾಟಕದಲ್ಲಿ ಜಾರಿಯಲ್ಲಿರುವ ಗ್ಯಾರಂಟಿ ಯೋಜನೆಗಳ ಆರ್ಥಿಕ ಹೊರೆಯ ಬಗ್ಗೆ ಈ ಮೊದಲೇ ಧ್ವನಿ ಎತ್ತಿದ್ದ ಕುಮಾರಸ್ವಾಮಿ, ಇದೀಗ ನೆರೆರಾಜ್ಯ ತಮಿಳುನಾಡಿನಲ್ಲೂ ಇಂತಹ ‘ಉಚಿತ ಸಂಸ್ಕೃತಿ’ ಹರಡುತ್ತಿರುವುದಕ್ಕೆ ತಮ್ಮದೇ ಶೈಲಿಯಲ್ಲಿ ವಿರೋಧ ವ್ಯಕ್ತಪಡಿಸಿದ್ದಾರೆ. ಚುನಾವಣಾ ಹೊಸ್ತಿಲಲ್ಲಿರುವ ತಮಿಳುನಾಡಿನಲ್ಲಿ ವಿಜಯ್ ಅವರ ಪಕ್ಷದ ಮುಂದಿನ ನಡೆ ಹಾಗೂ ಈ ಟೀಕೆಗಳಿಗೆ ಅವರು ನೀಡುವ ಉತ್ತರ ಕುತೂಹಲ ಮೂಡಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !