ಹೊಸದಿಗಂತ ವರದಿ ಕಲಬುರಗಿ:
ಕಲಬುರಗಿ- ಚಿಂಚೋಳಿ ಕಾರ್ಯಚರಣೆಯಲ್ಲಿದ ಬಸ್ ಸಂಖ್ಯೆ ಕೆಎ.28 ಎಫ್-1985 ರಾತ್ರಿ ಕೊನೆಯ ಸುತ್ತಿನ ಕಾರ್ಯಾಚರಣೆ ಸಂದರ್ಭದಲ್ಲಿ ಹೆಡ್ ಲೈಟ್ ಮಂದಗತಿ ಇರುವ ಕಾರಣ ಮೊಬೈಲ್ ಟಾರ್ಚ್ ಬೆಳಕಲ್ಲಿ ಬಸ್ ಚಾಲನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಮತೆ ಬಸ್ ಚಾಲಕ ಸೇರಿ ಮೂವರು ಸಿಬ್ಬಂದಿಯನ್ನು ಸೋಮವಾರ ಅಮಾನತ್ತು ಮಾಡಿ ಆದೇಶ ಹೊರಡಿಸಲಾಗಿದೆ ಎಂದು ಸಂಸ್ಥೆಯ ಕಲಬುರಗಿ ವಿಭಾಗ-1ರ ವಿಭಾಗೀಯ ನಿಯಂತ್ರಣಾಧಿಕಾರಿ ಎಸ್.ಜಿ.ಗಂಗಾಧರ ತಿಳಿಸಿದ್ದಾರೆ.
ಕಳೆದ ಜುಲೈ 4 ರಂದು ಚಿಂಚೋಳಿ ಘಟಕದ ಅನುಸೂಚಿ ಸಂಖ್ಯೆ 83 ರಲ್ಲಿ ಚಿಂಚೋಳಿ-ಕಲಬುರಗಿ ಮಾರ್ಗಕ್ಕೆ ನಿಯೋಜನೆ ಆಗಿರುವ ಕೆ.ಎ. 28 ಎಫ್-1985 ಬಸ್ ರಾತ್ರಿ ಕಲಬುರಗಿ-ಚಿಂಚೋಳಿ ಕೊನೆ ಸುತ್ತು ಹೋಗುವಾಗ ಹೆಡ್ ಲೈಟ್ ಮಂದಗತಿ ಇರುವ ಕಾರಣ ಮೊಬೈಲ್ ಟಾರ್ಚ್ ಬೆಳಕಲ್ಲಿ ಬಸ್ ಸಂಚರಿಸಿದ್ದು, ಈ ಕುರಿತು ಹೊಸ ದಿಗಂತ ಪತ್ರಿಕೆಯೂ ‘ಮೊಬೈಲ್ ಟಾರ್ಚ್ ಬೆಳಕಲ್ಲಿ ಓಡಿದ ಬಸ್’ ಎಂಬ ಶಿರ್ಷಿಕೆಯಡಿ ಸುದ್ದಿ ಪ್ರಕಟ ಮಾಡಿತ್ತು.
ಇದನ್ನೂ ಓದಿ:
ಈ ಸಂಬಂಧ ಅಧಿಕಾರಿಗಳು ಚಿಂಚೋಳಿ ಘಟಕಕ್ಕೆ ಭೇಟಿ ನೀಡಿ ತಪಾಸಣೆ ವರದಿ ನೀಡಿದ್ದು, ಅದರಂತೆ ಬಸ್ಸಿಗೆ ಸರಿಯಾಗಿ ದುರಸ್ತಿ ಮಾಡದ ತಾಂತ್ರಿಕ ಸಿಬ್ಬಂದಿ ಶಿವಾನಂದ, ಮೇಲ್ವಿಚಾರಣೆ ಮಾಡದ ತಾಂತ್ರಿಕ ಮೇಲ್ವಿಚಾರಕ ಬಸವರಾಜ ಹಾಗೂ ವಾಹನ ದುರಸ್ಥಿ ಮಾಡಿಸಿಕೊಳ್ಳದೇ ಅಜಾಗೂರಕತೆಯಿಂದ ವಾಹನ ಚಲಾಯಿಸಿದ ಚಾಲಕ ಆಕಾಶ ಅವರನ್ನು ಕರ್ತವ್ಯ ಲೋಪದ ಹಿನ್ನಲೆಯಲ್ಲಿ ಅಮಾನತ್ತುಗೊಳಿಸಲಾಗಿದೆ.
ಇನ್ನು ಈ ರೀತಿಯ ಘಟನೆಗಳು ಮರು ಕಳಿಸದಂತೆ ಎಲ್ಲಾ ಘಟಕ ವ್ಯವಸ್ಥಾಪಕರಿಗೆ ಮತ್ತು ಸಿಬ್ಬಂದಿಗಳಿಗೆ ಜಾಗೂರಕತೆಯಿಂದ ಕರ್ತವ್ಯ ನಿರ್ವಹಿಸಲು ಸೂಚಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



