August 24, 2026
Monday, August 24, 2026
spot_img

DC vs KKR | ಡೆಲ್ಲಿಗೆ ಮತ್ತೆ ಕಾಡಿದ ಬ್ಯಾಟಿಂಗ್ ವೈಫಲ್ಯ: 143 ರನ್​ಗಳ ಗುರಿಯತ್ತ ಕೋಲ್ಕತ್ತಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಮಹತ್ವದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನಿರೀಕ್ಷಿತ ಆರಂಭ ಪಡೆದರೂ ಮಧ್ಯಮ ಕ್ರಮಾಂಕದ ವೈಫಲ್ಯದಿಂದ ಕಡಿಮೆ ಮೊತ್ತಕ್ಕೆ ಸೀಮಿತವಾಯಿತು. ಆರಂಭದಲ್ಲಿ ಗಟ್ಟಿಯಾದ ನೆಲೆ ಕಟ್ಟಿದ ತಂಡ, ಕ್ಷಣಾರ್ಧದಲ್ಲಿ ವಿಕೆಟ್‌ಗಳನ್ನು ಕಳೆದುಕೊಂಡು ಒತ್ತಡಕ್ಕೆ ಸಿಲುಕಿತು.

ಮೊದಲು ಬ್ಯಾಟಿಂಗ್ ಆರಂಭಿಸಿದ ಡೆಲ್ಲಿ ಪರ ಆರಂಭಿಕ ಜೋಡಿ ಚುರುಕಿನ ಆಟ ಪ್ರದರ್ಶಿಸಿತು. ಪಾತುಮ್ ನಿಸ್ಸಾಂಕ ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ಎದುರಾಳಿ ಬೌಲರ್‌ಗಳ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾದರು. ಮತ್ತೊಂದೆಡೆ ಕೆಎಲ್ ರಾಹುಲ್ ಕೂಡ ವೇಗವಾಗಿ ರನ್ ಸೇರಿಸಿ ಮೊದಲ ವಿಕೆಟ್‌ಗೆ ಉತ್ತಮ ಜೊತೆಯಾಟ ನೀಡಿದರು. ಆದರೆ ರಾಹುಲ್ ವಿಕೆಟ್ ಪತನವಾಗುತ್ತಿದ್ದಂತೆಯೇ ಡೆಲ್ಲಿ ಇನ್ನಿಂಗ್ಸ್ ಹಳಿ ತಪ್ಪಿತು.

ಇದನ್ನೂ ಓದಿ:

ಅದರ ಬಳಿಕ ಬಂದ ಬ್ಯಾಟರ್‌ಗಳು ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ನಿಲ್ಲಲಿಲ್ಲ. ನಿತೀಶ್ ರಾಣಾ, ಸಮೀರ್ ರಿಜ್ವಿ ಮತ್ತು ಟ್ರಿಸ್ಟಾನ್ ಸ್ಟಬ್ಸ್ ಅಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು. ಅರ್ಧಶತಕ ಸಿಡಿಸಿದ್ದ ನಿಸ್ಸಾಂಕ ಕೂಡ ನಿರ್ಣಾಯಕ ಹಂತದಲ್ಲಿ ಔಟಾದ ಕಾರಣ ಡೆಲ್ಲಿ ಸಂಕಷ್ಟಕ್ಕೆ ಸಿಲುಕಿತು.

ಕೊನೆಯಲ್ಲಿ ಅಶುತೋಷ್ ಶರ್ಮಾ ಹೋರಾಟದ ಬ್ಯಾಟಿಂಗ್ ನಡೆಸಿ ತಂಡದ ಮೊತ್ತಕ್ಕೆ ಸ್ವಲ್ಪ ಚೈತನ್ಯ ತುಂಬಿದರು. ಅವರ ಜವಾಬ್ದಾರಿಯುತ ಆಟದಿಂದ ಡೆಲ್ಲಿ 142 ರನ್ ಗಡಿ ತಲುಪಿದ್ದು, ಇದೀಗ ಬೌಲರ್‌ಗಳ ಮೇಲೆ ಗೆಲುವಿನ ಹೊಣೆ ಬಿದ್ದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !