ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ ಎರಡು ವರ್ಷಗಳಿಂದ ಜಾಗತಿಕವಾಗಿ ತಲ್ಲಣ ಮೂಡಿಸಿರುವ ರಷ್ಯಾ ಮತ್ತು ಉಕ್ರೇನ್ ಯುದ್ಧಕ್ಕೆ ಈಗ ತಾತ್ಕಾಲಿಕ ವಿರಾಮ ಬಿದ್ದಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಂಧಾನದ ಫಲವಾಗಿ, ಉಭಯ ದೇಶಗಳು ಮೇ 9ರಿಂದ ಮೇ 11ರವರೆಗೆ ಮೂರು ದಿನಗಳ ಕಾಲ ಕದನ ವಿರಾಮ ಘೋಷಿಸಿವೆ.
ತಮ್ಮ ಅಧಿಕೃತ ‘ಟ್ರೂತ್ ಸೋಶಿಯಲ್’ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಟ್ರಂಪ್, “ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ಸುದೀರ್ಘ ಮಾತುಕತೆ ನಡೆಸಲಾಗಿದ್ದು, ನನ್ನ ಕೋರಿಕೆಗೆ ಇಬ್ಬರೂ ನಾಯಕರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಹೀಗಾಗಿ ಮೂರು ದಿನಗಳ ಕಾಲ ಯುದ್ಧ ಚಟುವಟಿಕೆಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ” ಎಂದು ತಿಳಿಸಿದ್ದಾರೆ.
ಮೇ 9 ರಂದು ರಷ್ಯಾದಲ್ಲಿ 2ನೇ ಮಹಾಯುದ್ಧದ ‘ವಿಜಯ ದಿನ’ವನ್ನು ಆಚರಿಸಲಾಗುತ್ತದೆ. ಉಕ್ರೇನ್ ಕೂಡ ಈ ಐತಿಹಾಸಿಕ ವಿಜಯದಲ್ಲಿ ಪ್ರಮುಖ ಪಾತ್ರ ವಹಿಸಿರುವುದರಿಂದ, ಆಚರಣೆಯ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಅವಧಿಯಲ್ಲಿ ಯಾವುದೇ ರೀತಿಯ ಕ್ಷಿಪಣಿ ದಾಳಿ ಅಥವಾ ಮಿಲಿಟರಿ ಕಾರ್ಯಾಚರಣೆಗಳು ನಡೆಯುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಈ ಕದನ ವಿರಾಮದ ಮತ್ತೊಂದು ಮಹತ್ವದ ಅಂಶವೆಂದರೆ ಯುದ್ಧ ಕೈದಿಗಳ ವಿನಿಮಯ. ಒಪ್ಪಂದದ ಪ್ರಕಾರ, ರಷ್ಯಾ ಮತ್ತು ಉಕ್ರೇನ್ ತಲಾ 1,000 ಯುದ್ಧ ಕೈದಿಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳಲಿವೆ. ಈ ಮಾನವೀಯ ಕ್ರಮವು ಎರಡೂ ದೇಶಗಳ ನಡುವಿನ ಸಂಘರ್ಷವನ್ನು ಶಾಂತಿಯುತವಾಗಿ ಅಂತ್ಯಗೊಳಿಸಲು ನಾಂದಿಯಾಗಬಹುದು ಎಂದು ಟ್ರಂಪ್ ಆಶಯ ವ್ಯಕ್ತಪಡಿಸಿದ್ದಾರೆ.
ಈ ತಾತ್ಕಾಲಿಕ ಕದನ ವಿರಾಮವು ಭವಿಷ್ಯದಲ್ಲಿ ಶಾಂತಿ ಮಾತುಕತೆಗೆ ದಾರಿಯಾಗಲಿದೆಯೇ ಎಂಬುದು ಇಡೀ ವಿಶ್ವದ ಕುತೂಹಲಕ್ಕೆ ಕಾರಣವಾಗಿದೆ.



