October 10, 2026
Saturday, October 10, 2026
spot_img

‘ರಾಜಕೀಯ ಲಾಭಕ್ಕಾಗಿ ದೇಶದಲ್ಲಿ ಅರಾಜಕತೆ ಸೃಷ್ಟಿಸುತ್ತಿದ್ದಾರೆ’: ರಾಹುಲ್ ವಿರುದ್ಧ ನಿತಿನ್ ನಬಿನ್ ಕಿಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್ ಜನತಾ ಪಾರ್ಟಿ ಹಾಗೂ ‘ಇಂಡಿಯಾ’ ಒಕ್ಕೂಟ ಹಮ್ಮಿಕೊಂಡಿರುವ ‘ಜಂತರ್ ಮಂತರ್ 2.0’ ಬೃಹತ್ ಪ್ರತಿಭಟನೆಯ ದಿನವೇ ವಿರೋಧ ಪಕ್ಷಗಳ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ.

ದೇಶದ 140 ಕೋಟಿ ಜನತೆ ಅತ್ಯಂತ ಶಾಂತಿ, ಸಾಮರಸ್ಯದಿಂದ ಬಾಳುತ್ತಾ ಭಾರತದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಈ ಹೊತ್ತಿನಲ್ಲಿ, ರಾಜಕೀಯ ಲಾಭಕ್ಕಾಗಿ ಇಡೀ ದೇಶವನ್ನು ಅಸ್ಥಿರಗೊಳಿಸಲು ವಿರೋಧ ಪಕ್ಷಗಳು ವಿದೇಶಿ ಶಕ್ತಿಗಳ ಪ್ರಚೋದನೆಯ ಮೇರೆಗೆ ಸಂಚು ರೂಪಿಸಿವೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಗಂಭೀರವಾಗಿ ಆರೋಪಿಸಿದ್ದಾರೆ.

ದೆಹಲಿಯಲ್ಲಿ ಶನಿವಾರ ತುರ್ತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದೇಶದಲ್ಲಿ ಅರಾಜಕತೆ ಸೃಷ್ಟಿಸಲು ವಿಪಕ್ಷಗಳ ನಡುವೆ ದೊಡ್ಡ ಪೈಪೋಟಿ ನಡೆಯುತ್ತಿದೆ ಎಂದು ಕಿಡಿಕಾರಿದರು.

ಅರಾಜಕತೆ ಸೃಷ್ಟಿಸಲು ಎರಡು ಗುಂಪುಗಳ ನಡುವೆ ಪೈಪೋಟಿ

ವಿಪಕ್ಷಗಳ ಧೋರಣೆಯನ್ನು ತರಾಟೆಗೆ ತೆಗೆದುಕೊಂಡ ನಿತಿನ್ ನಬಿನ್, ಇಂದು ದೇಶದಲ್ಲಿ ಅರಾಜಕತೆ ಸೃಷ್ಟಿಸಲು ವ್ಯವಸ್ಥಿತ ಪ್ರಯತ್ನ ನಡೆಯುತ್ತಿದೆ. ಇದಕ್ಕಾಗಿ ಎರಡು ಗುಂಪುಗಳು ಮುಂಚೂಣಿಯಲ್ಲಿ ನಿಂತಿವೆ. ಒಂದು ‘ಇಂಡಿ ಒಕ್ಕೂಟ’ ಮುನ್ನಡೆಸುತ್ತಿರುವ ರಾಹುಲ್ ಗಾಂಧಿ ಅವರ ತಂಡವಾದರೆ, ಮತ್ತೊಂದು ಅರವಿಂದ್ ಕೇಜ್ರಿವಾಲ್ ಅವರ ಸಹಚರರಾಗಿರುವ ಸಿಜೆಪಿ ತಂಡ. ಈ ಎರಡೂ ಗುಂಪುಗಳು ದೇಶದಲ್ಲಿ ಯಾರು ಹೆಚ್ಚು ಅಸ್ಥಿರತೆ ಮತ್ತು ಗೊಂದಲವನ್ನು ಸೃಷ್ಟಿಸಬಹುದು ಎಂಬ ‘ಅರಾಜಕತೆಯ ಸ್ಪರ್ಧೆ’ಗೆ ಇಳಿದಿವೆ. ಆದರೆ ನಿಮ್ಮ ಈ ಯಾವುದೇ ದುಷ್ಟ ಆಲೋಚನೆಗಳು ಭಾರತದಲ್ಲಿ ಯಶಸ್ವಿಯಾಗುವುದಿಲ್ಲ ಎಂದು ನೇರ ಎಚ್ಚರಿಕೆ ನೀಡಿದರು.

ಜನರ ತೀರ್ಪನ್ನು ಒಪ್ಪದ ನಾಯಕರ ಹುನ್ನಾರ

ಲೋಕಸಭಾ ಚುನಾವಣೆಯಲ್ಲಿ ದೇಶದ ಜನತೆ ಈಗಾಗಲೇ ನಿಮಗೆ ತಕ್ಕ ಪಾಠ ಕಲಿಸಿ ತಿರಸ್ಕರಿಸಿದ್ದಾರೆ. ಆ ತೀರ್ಪನ್ನು ಗೌರವದಿಂದ ಒಪ್ಪಿಕೊಳ್ಳುವ ಅಥವಾ ಅದರಿಂದ ತಪ್ಪುಗಳನ್ನು ತಿದ್ದಿಕೊಳ್ಳುವ ಕನಿಷ್ಠ ಜ್ಞಾನವೂ ನಿಮಗಿಲ್ಲ. ಅದಕ್ಕಾಗಿಯೇ ಜನರ ತೀರ್ಪಿಗೆ ಸೆಡ್ಡು ಹೊಡೆದು ದೇಶವನ್ನು ಅಸ್ಥಿರಗೊಳಿಸುವ ಪ್ಲ್ಯಾನ್ ಮಾಡಿದ್ದೀರಾ. ಕೇವಲ ನಿಮ್ಮ ಸ್ವಾರ್ಥ ರಾಜಕೀಯ ಅಜೆಂಡಾಗಳನ್ನು ಈಡೇರಿಸಿಕೊಳ್ಳಲು, ವಿದೇಶದಲ್ಲಿ ಕುಳಿತಿರುವ ಭಾರತ ವಿರೋಧಿ ಶಕ್ತಿಗಳ ಪ್ರಚೋದನೆಯಿಂದ ನೀವು ದೆಹಲಿಯ ಬೀದಿಗಳಲ್ಲಿ ಹೈಡ್ರಾಮಾ ಮಾಡುತ್ತಿದ್ದೀರಾ? ಎಂದು ನಬಿನ್ ಗುಡುಗಿದರು.

ಇದನ್ನೂ ಓದಿ:

ಭಾರತದ ಬೆಳವಣಿಗೆಯನ್ನು ಸಹಿಸಲಾಗುತ್ತಿಲ್ಲ

ಜಾಗತಿಕ ಮಟ್ಟದಲ್ಲಿ ಸಾಲು ಸಾಲು ಬಿಕ್ಕಟ್ಟುಗಳು ಎದುರಾಗಿದ್ದರೂ ಭಾರತ ಇಂದು ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಸ್ವಾವಲಂಬಿ ಮತ್ತು ಸಶಕ್ತ ರಾಷ್ಟ್ರವಾಗಿ ಮುನ್ನುಗ್ಗುತ್ತಿದೆ. ಆದರೆ ಈ ಸತ್ಯವನ್ನು ಒಪ್ಪಿಕೊಳ್ಳಲು ವಿರೋಧ ಪಕ್ಷಗಳಿಗೆ ಆಗುತ್ತಿಲ್ಲ. ಭಾರತದ ಈ ಬೆಳವಣಿಗೆ ಮತ್ತು ಪ್ರಗತಿ ನಿಮ್ಮ ಹೊಟ್ಟೆ ಉರಿಸುತ್ತಿದೆ. ಅದಕ್ಕಾಗಿಯೇ ದೇಶದ ಶಾಂತಿಯನ್ನು ಕದಡಲು ಯತ್ನಿಸುತ್ತಿದ್ದೀರಾ. ಆದರೆ ಭಾರತದ ಪ್ರಜಾಪ್ರಭುತ್ವ ಅತ್ಯಂತ ಬಲಿಷ್ಠವಾಗಿದ್ದು, ಈ ದೇಶದ ಕೋಟ್ಯಂತರ ದೇಶಭಕ್ತರು ಒಟ್ಟಾಗಿ ನಿಮ್ಮ ಇಂತಹ ಎಲ್ಲಾ ದೇಶವಿರೋಧಿ ಸಂಚುಗಳನ್ನು ಧೂಳೀಪಟ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Must Read