ಹೊಸದಿಗಂತ ವರದಿ ಕಾರವಾರ:
ಚಿತ್ರದುರ್ಗದಲ್ಲಿ ನಡೆದ ಯಡಿಯೂರಪ್ಪ ಅಭಿಮಾನೋತ್ಸವ ಅದ್ಧೂರಿಯಾಗಿ ನಡೆದಿದ್ದು, ಬಿಜೆಪಿ ರಾಜ್ಯ ಉಪಾಧ್ಯಕ್ಷೆ, ಮಾಜಿ ಶಾಸಕಿ ರೂಪಾಲಿ ಎಸ್.ನಾಯ್ಕ ಅವರ ನೇತೃತ್ವದಲ್ಲಿ ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರ ಹಾಗೂ ಜಿಲ್ಲೆಯಿಂದ ಸಾವಿರಾರು ಜನರು ಪಾಲ್ಗೊಂಡಿದ್ದರು.
ಕೋಟೆನಾಡು ಚಿತ್ರದುರ್ಗದಲ್ಲಿ ರೈತ ನಾಯಕ, ಹುಟ್ಟು ಹೋರಾಟಗಾರ, ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ 50 ವರ್ಷಗಳ ಸಾರ್ಥಕ ಜನಸೇವೆ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ ಯಡಿಯೂರಪ್ಪ ಅಭಿಮಾನೋತ್ಸವದಲ್ಲಿ ಜಿಲ್ಲೆಯ ಜನತೆ ಉತ್ಸಾಹದಿಂದ ಪಾಲ್ಗೊಂಡು ಕೇಂದ್ರ ಗೃಹ ಸಚಿವ ಅಮಿತ್ ಶಾ, ಮಾಜಿ ಮುಖ್ಯಮಂತ್ರಿಗಳು, ಕೇಂದ್ರ ಸಚಿವರು, ಬಿಜೆಪಿ ರಾಜ್ಯ ಅಧ್ಯಕ್ಷ ಬಿ ವೈ ವಿಜಯೇಂದ್ರ ಹಾಗೂ ಕಾರ್ಯಕ್ರಮದ ಕೇಂದ್ರವಾಗಿದ್ದ ಬಿ ಎಸ್ ಯಡಿಯೂರಪ್ಪ ಅವರ ಮಾತುಗಳನ್ನು ಕೇಳಿ ಸಂತಸಗೊಂಡರು.
ಭಾರತೀಯ ಜನತಾ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಿ ರಾಜ್ಯದಲ್ಲಿ ಅಧಿಕಾರಕ್ಕೆ ಬರುವಲ್ಲಿ ಪ್ರಮುಖಪಾತ್ರ ವಹಿಸಿದ ಯಡಿಯೂರಪ್ಪ ಅಭಿಮಾನೋತ್ಸವದ ಸಂಭ್ರಮ, ಸಡಗರದಲ್ಲಿ ಭಾಗವಹಿಸುವಂತಾದದ್ದು ಖುಷಿ ನೀಡಿದೆ ಎಂದು ಜಿಲ್ಲೆಯಿಂದ ತೆರಳಿದ ಕಾರ್ಯಕರ್ತರು, ಜನತೆ ಅಭಿಪ್ರಾಯಪಟ್ಟರು.
ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ಎಸ್.ನಾಯ್ಕ ಜಿಲ್ಲೆಯಿಂದ ಆಗಮಿಸಿದ ಪಕ್ಷದ ಕಾರ್ಯಕರ್ತರು, ಪದಾಧಿಕಾರಿಗಳು ಹಾಗೂ ಜನತೆಯನ್ನು ಸ್ವಾಗತಿಸಿದರು. ಜಿಲ್ಲೆಯಿಂದ 30ಕ್ಕೂ ಹೆಚ್ಚು ಬಸ್ಸುಗಳು, ಟೆಂಪೋಗಳು, ಕಾರುಗಳು, ಖಾಸಗಿ ವಾಹನಗಳಲ್ಲಿ ಜನತೆ ಅಭಿಮಾನೋತ್ಸವದಲ್ಲಿ ಪಾಲ್ಗೊಂಡಿದ್ದರು.
ಯಡಿಯೂರಪ್ಪ ಅಭಿಮಾನೋತ್ಸವ ಅದ್ಧೂರಿಯಾಗಿ ನಡೆಯಿತು. ನಮ್ಮ ಜಿಲ್ಲೆಯ ಸಾವಿರಾರು ಜನರು ಈ ಅಭಿಮಾನೋತ್ಸವದಲ್ಲಿ ಪಾಲ್ಗೊಂಡಿರುವುದು ಸಂತಸ ತಂದಿದೆ. ಆಗಮಿಸಿದ ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸುತ್ತೇನೆ.
ಎಂದು ರೂಪಾಲಿ ಎಸ್.ನಾಯ್ಕ ಹೇಳಿದರು.



