ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದ ಕಲೆ, ಸಾಹಿತ್ಯ, ಕ್ರೀಡೆ, ಸಮಾಜ ಸೇವೆ, ವೈದ್ಯಕೀಯ ಹಾಗೂ ಸಾರ್ವಜನಿಕ ವ್ಯವಹಾರಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅಪ್ರತಿಮ ಸೇವೆ ಸಲ್ಲಿಸಿದ ದೇಶದ ಒಟ್ಟು ಸಾಧಕರಿಗೆ ಇಂದು ನಡೆದ ಭವ್ಯ ಸಮಾರಂಭದಲ್ಲಿ ಪದ್ಮ ಪ್ರಶಸ್ತಿಗಳನ್ನು ನೀಡಿ ಪುರಸ್ಕರಿಸಲಾಯಿತು. ಈ ವಿಶೇಷ ಪ್ರದಾನ ಸಮಾರಂಭದಲ್ಲಿ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಸಿ. ಪಿ. ರಾಧಾಕೃಷ್ಣನ್, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಗಣರಾಜ್ಯೋತ್ಸವದ ಮುನ್ನಾದಿನದಂದು ಒಟ್ಟು 131 ಪದ್ಮ ಪ್ರಶಸ್ತಿಗಳನ್ನು ಘೋಷಿಸಲಾಗಿತ್ತು. ಅದರಲ್ಲಿ ಮೊದಲ ಹಂತದ ಪ್ರದಾನ ಸಮಾರಂಭವು ಮೇ 25 ರಂದು ನಡೆದಿತ್ತು. ಇಂದು ನಡೆದ ಎರಡನೇ ಹಂತದ ಕಾರ್ಯಕ್ರಮದಲ್ಲಿ ಉಳಿದ 65 ಸಾಧಕರಿಗೆ ಪದ್ಮವಿಭೂಷಣ, ಪದ್ಮಭೂಷಣ ಹಾಗೂ ಪದ್ಮಶ್ರೀ ಪ್ರಶಸ್ತಿಗಳನ್ನು ಹಸ್ತಾಂತರಿಸಲಾಯಿತು.
ಪದ್ಮವಿಭೂಷಣ ಮತ್ತು ಪದ್ಮಭೂಷಣ ಪುರಸ್ಕೃತರು
ಇಂದಿನ ಸಮಾರಂಭದಲ್ಲಿ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಕೆ. ಟಿ. ಥಾಮಸ್ ಮತ್ತು ಹಿರಿಯ ಮಲಯಾಳಂ ಪತ್ರಕರ್ತ ಪಿ. ನಾರಾಯಣನ್ ಪದ್ಮವಿಭೂಷಣ ಪ್ರಶಸ್ತಿಯನ್ನು ಸ್ವೀಕರಿಸಿದರು.
ಕಲಾ ಮತ್ತು ವೈದ್ಯಕೀಯ ಕ್ಷೇತ್ರದ ದಿಗ್ಗಜರಾದ ಖ್ಯಾತ ಮಲಯಾಳಂ ನಟ ಮಮ್ಮುಟ್ಟಿ, ಬಾಲಿವುಡ್‌ನ ಜನಪ್ರಿಯ ಹಿನ್ನೆಲೆ ಗಾಯಕಿ ಅಲ್ಕಾ ಯಾಗ್ನಿಕ್, ಪ್ರಸಿದ್ಧ ಟೆನಿಸ್ ಆಟಗಾರ ವಿಜಯ್ ಅಮೃತ್‌ರಾಜ್, ವಿದ್ವಾಂಸ ಶತಾವಧಾನಿ ಆರ್. ಗಣೇಶ್ ಮತ್ತು ಅಮೆರಿಕದ ಹೆಸರಾಂತ ಕ್ಯಾನ್ಸರ್ ತಜ್ಞ ಡಾ. ನೋರಿ ದತ್ತಾತ್ರೇಯುಡು ರಾಷ್ಟ್ರಪತಿಗಳಿಂದ ಪದ್ಮಭೂಷಣ ಪ್ರಶಸ್ತಿಯನ್ನು ಸ್ವೀಕರಿಸಿದರು. ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ದಿವಂಗತ ಶಿಬು ಸೊರೇನ್ ಪರವಾಗಿ ಅವರ ಪತ್ನಿ ರೂಪಿ ಸೊರೇನ್ ಪ್ರಶಸ್ತಿಯನ್ನು ಪಡೆದರು.
ಪದ್ಮಶ್ರೀ ಸ್ವೀಕರಿಸಿದ ಪ್ರಮುಖರು
ವಿವಿಧ ಕ್ಷೇತ್ರಗಳ ಸಾಧಕರಿಗೆ ಇಂದು ಪದ್ಮಶ್ರೀ ನೀಡಿ ಸನ್ಮಾನಿಸಲಾಯಿತು. ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಸ್ಟಾರ್ ಆಟಗಾರ ರೋಹಿತ್ ಶರ್ಮಾ, ಮಹಿಳಾ ಕ್ರಿಕೆಟ್ ನಾಯಕಿ ಹರ್ಮನ್‌ಪ್ರೀತ್ ಕೌರ್, ಬಹುಭಾಷಾ ನಟ ಆರ್. ಮಾಧವನ್ ಮತ್ತು ಹಿರಿಯ ನಟರಾದ ಮುರಳಿ ಮೋಹನ್ ಹಾಗೂ ರಾಜೇಂದ್ರ ಪ್ರಸಾದ್ ಪ್ರಶಸ್ತಿ ಮುಡಿಗೇರಿಸಿಕೊಂಡರು.
ಇದನ್ನೂ ಓದಿ:
ಕರ್ನಾಟಕದ ಸಾಧಕರಿಗೆ ಗೌರವ:
ಇಂದು ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಶಿಕ್ಷಣ ತಜ್ಞ ಡಾ. ಪ್ರಭಾಕರ್ ಕೋರೆ, ತಂತ್ರಜ್ಞ ಶಶಿ ಶೇಖರ್ ವೆಂಪತಿ, ವೈದ್ಯ ಡಾ. ಸುರೇಶ್ ಹನಗವಾಡಿ, ಉದ್ಯಮಿ ಟಿ. ಟಿ. ಜಗನ್ನಾಥನ್ ಮತ್ತು ಸಮಾಜ ಸೇವಕಿ ಶುಭಾ ವೆಂಕಟೇಶ್ ಅಯ್ಯಂಗಾರ್ ಅವರು ತಮ್ಮ ತಮ್ಮ ಕ್ಷೇತ್ರಗಳ ಅದ್ಭುತ ಸೇವೆಗಾಗಿ ರಾಷ್ಟ್ರಪತಿಗಳಿಂದ ಪದ್ಮಶ್ರೀ ಪ್ರಶಸ್ತಿಗಳನ್ನು ಸ್ವೀಕರಿಸಿದರು.



