ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ ನಾಲ್ಕು ವರ್ಷಗಳಿಂದ ಜಗತ್ತನ್ನೇ ನಡುಗಿಸಿರುವ ರಷ್ಯಾ ಮತ್ತು ಉಕ್ರೇನ್ ನಡುವಿನ ಮಹಾಯುದ್ಧವು ಕೊನೆಗೂ ಅಂತ್ಯಗೊಳ್ಳುವ ಲಕ್ಷಣಗಳು ಗೋಚರಿಸುತ್ತಿವೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಇತ್ತೀಚಿನ ನಡೆ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಧ್ಯಸ್ಥಿಕೆಯು ಈ ನಿಟ್ಟಿನಲ್ಲಿ ಮಹತ್ವದ ತಿರುವು ನೀಡಿವೆ.
ಮಾಸ್ಕೋದಲ್ಲಿ ನಡೆದ ವಿಜಯ ದಿನಾಚರಣೆಯ ಸಂದರ್ಭದಲ್ಲಿ ಮಾತನಾಡಿದ ವ್ಲಾಡಿಮಿರ್ ಪುಟಿನ್, “ಯುದ್ಧವು ಈಗ ಮುಕ್ತಾಯದ ಹಂತಕ್ಕೆ ತಲುಪಿದೆ ಎಂದು ನಾನು ಭಾವಿಸುತ್ತೇನೆ” ಎಂದು ಹೇಳಿದ್ದಾರೆ. ಇದು ಕೇವಲ ಹೇಳಿಕೆಯಲ್ಲ, ಬದಲಿಗೆ ರಷ್ಯಾ ಸಂಘರ್ಷವನ್ನು ನಿಲ್ಲಿಸಲು ಸಿದ್ಧವಿದೆ ಎಂಬ ಪರೋಕ್ಷ ಸೂಚನೆಯಾಗಿ ಜಗತ್ತಿಗೆ ತಲುಪಿದೆ. ಯುರೋಪಿಯನ್ ನಾಯಕರೊಂದಿಗೆ ಪುನಃ ಮಾತುಕತೆ ನಡೆಸಲು ಉತ್ಸುಕನಾಗಿದ್ದೇನೆ ಎಂದು ಅವರು ತಿಳಿಸಿದ್ದಾರೆ. ಆದರೆ, ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಅವರೊಂದಿಗೆ ನೇರ ಮಾತುಕತೆಗೆ ಶಾಂತಿ ಒಪ್ಪಂದದ ಮೂಲಭೂತ ಅಂಶಗಳ ಬಗ್ಗೆ ಸ್ಪಷ್ಟತೆ ಇರಬೇಕು ಎಂಬ ಷರತ್ತನ್ನು ವಿಧಿಸಿದ್ದಾರೆ.
ಅತ್ತ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪ್ರಯತ್ನದ ಫಲವಾಗಿ ಎರಡೂ ದೇಶಗಳು ಮೂರು ದಿನಗಳ ಕಾಲ ತಾತ್ಕಾಲಿಕ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ. ಈ ಅವಧಿಯಲ್ಲಿ ಎರಡೂ ದೇಶಗಳು ಪರಸ್ಪರ ತಲಾ 1,000 ಯುದ್ಧ ಕೈದಿಗಳನ್ನು ಬಿಡುಗಡೆ ಮಾಡಲು ಮುಂದಾಗಿವೆ. ಯುದ್ಧ ಆರಂಭವಾದಾಗಿನಿಂದ ನಡೆದ ಅತಿದೊಡ್ಡ ಮಾನವೀಯ ವಿನಿಮಯ ಪ್ರಕ್ರಿಯೆ ಇದಾಗಿದೆ.
ಡೊನಾಲ್ಡ್ ಟ್ರಂಪ್ ಈ ಬಗ್ಗೆ ಪ್ರತಿಕ್ರಿಯಿಸಿ, “ಈ ಯುದ್ಧವು ಎರಡನೇ ಮಹಾಯುದ್ಧದ ನಂತರದ ಅತ್ಯಂತ ಭೀಕರ ಜೀವಹಾನಿಗೆ ಕಾರಣವಾಗಿದೆ. ಎರಡೂ ದೇಶಗಳು ಈಗಲಾದರೂ ಶಾಶ್ವತವಾಗಿ ಶಸ್ತ್ರ ಕೆಳಗಿಟ್ಟು ಶಾಂತಿಯ ಹಾದಿ ಹಿಡಿಯಬೇಕು” ಎಂದು ಕರೆ ನೀಡಿದ್ದಾರೆ.
2022ರ ಫೆಬ್ರವರಿಯಲ್ಲಿ ಆರಂಭವಾದ ಈ ರಕ್ತಸಿಕ್ತ ಹೋರಾಟದಲ್ಲಿ ಲಕ್ಷಾಂತರ ಜನರು ಮನೆಮಠ ಕಳೆದುಕೊಂಡಿದ್ದಾರೆ, ಸಾವಿರಾರು ಜೀವಗಳು ಬಲಿಯಾಗಿವೆ. ಈಗ ಪುಟಿನ್ ಅವರ ಬದಲಾದ ಧೋರಣೆ ಮತ್ತು ಅಮೆರಿಕದ ಮಧ್ಯಸ್ಥಿಕೆಯು ಯುದ್ಧ ಪೀಡಿತ ಜನರಲ್ಲಿ ಹೊಸ ಆಶಾವಾದವನ್ನು ಮೂಡಿಸಿದೆ.



