ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕದ ಪ್ರಮುಖ ವಿದ್ಯುತ್ ವಾಹನ ತಯಾರಿಕಾ ಸಂಸ್ಥೆ ಟೆಸ್ಲಾ ತನ್ನ ಜನಪ್ರಿಯ ಸೈಬರ್ ಟ್ರಕ್ ಮಾದರಿಯ ಕೆಲವು ವಾಹನಗಳಲ್ಲಿ ತಾಂತ್ರಿಕ ದೋಷ ಪತ್ತೆಯಾಗಿರುವ ಹಿನ್ನೆಲೆ ಮರುಪಡೆಯುವಿಕೆ ಕ್ರಮ ಆರಂಭಿಸಿದೆ. ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ.
ಕಂಪನಿ ನೀಡಿರುವ ಮಾಹಿತಿಯ ಪ್ರಕಾರ, ವಾಹನದ ಚಕ್ರ ಭಾಗದಲ್ಲಿ ಬಳಸಲಾದ ಕೆಲವು ಉಪಕರಣಗಳಲ್ಲಿ ತಯಾರಿಕಾ ಹಂತದ ಲೋಪ ಕಂಡುಬಂದಿದೆ. ವಿಶೇಷವಾಗಿ ಬ್ರೇಕ್ ರೋಟರ್ ಭಾಗದಲ್ಲಿ ಬಿರುಕು ಮೂಡುವ ಸಾಧ್ಯತೆ ಹಾಗೂ ತಪ್ಪಾದ ಗ್ರೀಸ್ ಬಳಕೆಯಿಂದ ಚಕ್ರದ ಜೋಡಣೆ ದುರ್ಬಲವಾಗುವ ಅಪಾಯವಿದೆ ಎಂದು ತಿಳಿಸಲಾಗಿದೆ.
ಇದನ್ನೂ ಓದಿ:
ಇದರಿಂದ ವಾಹನ ಚಲನೆಯಲ್ಲಿರುವಾಗ ಚಕ್ರದ ಹಿಡಿತ ಸಡಿಲವಾಗಿ, ಚಾಲಕನ ನಿಯಂತ್ರಣಕ್ಕೆ ಧಕ್ಕೆಯಾಗುವ ಸಂಭವ ಇದೆ. ಈ ಕಾರಣದಿಂದ ಮುನ್ನೆಚ್ಚರಿಕಾ ಕ್ರಮವಾಗಿ ಆಯ್ದ ವಾಹನಗಳನ್ನು ಹಿಂದಕ್ಕೆ ಪಡೆದು ಪರಿಶೀಲನೆ ನಡೆಸಲು ಸಂಸ್ಥೆ ಮುಂದಾಗಿದೆ.
2024ರಿಂದ 2026ರ ಅವಧಿಯಲ್ಲಿ ನಿರ್ಮಾಣವಾದ, 18 ಇಂಚಿನ ಸ್ಟೀಲ್ ಚಕ್ರಗಳನ್ನು ಹೊಂದಿರುವ ಕೆಲವು Cybertruck ವಾಹನಗಳಲ್ಲಿ ಮಾತ್ರ ಈ ಸಮಸ್ಯೆ ಕಂಡುಬಂದಿದೆ. ಬಾಧಿತ ವಾಹನಗಳ ಮಾಲೀಕರಿಗೆ ಮುಂಭಾಗ ಮತ್ತು ಹಿಂಭಾಗದ ಬ್ರೇಕ್ ರೋಟರ್, ಹಬ್ ಹಾಗೂ ಸಂಬಂಧಿತ ಭಾಗಗಳನ್ನು ಹೆಚ್ಚು ಬಾಳಿಕೆ ಬರುವ ಹೊಸ ಬಿಡಿಭಾಗಗಳೊಂದಿಗೆ ಉಚಿತವಾಗಿ ಬದಲಾಯಿಸಿ ನೀಡುವುದಾಗಿ ಟೆಸ್ಲಾ ಸ್ಪಷ್ಟಪಡಿಸಿದೆ.



